ನವದೆಹಲಿ : ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಕಾರ್ಯ ಕೂಡಲೇ ಆರಂಭಿಸಬೇಕು. ಹಾಗೆಯೇ ನರೇಂದ್ರ ಮೋದಿ ನೇತೃತ್ವದ ಎನ್.ಡಿ.ಎ ಸರ್ಕಾರದ ಈ ಅವಧಿಯಲ್ಲಿಯೇ ರಾಮಮಂದಿರ ನಿರ್ಮಾಣ ಕೆಲಸ ಪೂರ್ಣವಾಗಬೇಕು ಎಂದು ಸಾಧ್ವಿ ಪ್ರಾಚಿ ಆಗ್ರಹಿಸಿದ್ದಾರೆ.
ಬಿಜೆಪಿ ದಲಿತ ಮೋರ್ಚಾ ಆಯೋಜಿಸಿದ್ದ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಭಾಗವಹಿಸಲು ಆಗಮಿಸಿದ್ದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಗ್ಗೆ ವಿಎಚ್ ಪಿಯ ಕೇಂದ್ರೀಯ ಮಾರ್ಗದರ್ಶಕ್ ಮಂಡಲ್ ನಲ್ಲಿ ನಡೆಯಲಿರುವ 2 ದಿನಗಳ ಸಭೆಯಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಮೇ 25ರಂದು ಹರಿದ್ವಾರದಲ್ಲಿ 2 ದಿನಗಳ ಮಹತ್ವದ ಸಭೆ ನಡೆಯಲಿದೆ ಎಂದರು.
ಹಿಟ್ ಅಂಡ್ ರನ್ ಕೇಸ್ ನಲ್ಲಿ ಸಲ್ಮಾನ್ ಖಾನ್ ಗೆ ಜಾಮೀನು ಸಿಕ್ಕಿದ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ ಕುರಿತು ಸುದ್ದಿಗಾರರು ಪ್ರಶ್ನಿಸಿದಾಗ, ಮಾಲೇಗಾಂವ್ ಸ್ಫೋಟ ಪ್ರಕರಣದಲ್ಲಿ ಸಾಧ್ವಿ ಪ್ರಜ್ಞಾಗೆ ಜಾಮೀನು ನಿರಾಕರಿಸಿದ್ದಾರೆ, ರೇಪ್ ಸಂತ್ರಸ್ತೆ ಅರುಣಾ ಶಾನಭಾಗ್ ಗೆ ಕಳೆದ 42 ವರ್ಷಗಳಿಂದ ನ್ಯಾಯ ಸಿಗದೆ ಸಾವನ್ನಪ್ಪಿದ್ದಾರೆ. ಹಾಗಾದರೆ ಸಲ್ಮಾನ್ ಖಾನ್ ಗೆ ಹೇಗೆ ಸಲೀಸಾಗಿ ಬೇಲ್ ಸಿಕ್ಕಿತು ಎಂದು ಪ್ರಶ್ನಿಸಿದರು.