ಬೆಂಗಳೂರು : ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಣೆಯಲ್ಲಿ ಭಾರೀ ಪ್ರಮಾಣದ ಗೊಂದಲ, ಎಡವಟ್ಟುಗಳಿಂದಾಗಿ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ಆತಂಕಕ್ಕೀಡಾಗಿದ್ದು, ಕಂಗಾಲಾದ ವಿದ್ಯಾರ್ಥಿಗಳು ಹಾಗೂ ಪೋಷಕರು ಪ್ರತಿಭಟನೆ ನಡೆಸುತ್ತಿದ್ದಾರೆ.
ಮೇ 18ರಂದು ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು, ಒಂದೊಂದು ವೆಬ್ ಸೈಟ್ ನಲ್ಲಿ ಒಂದೊಂದು ರೀತಿಯ ಫಲಿತಾಂಶ ಪ್ರಕಟವಾಗಿದ್ದೇ ಈ ಎಡವಟ್ಟಿಗೆ ಕಾರಣವಾಗಿದೆ. ಫಲಿತಾಂಶದ ಗೊಂದಲದಿಂದ ಹೈರಾಣಾದ ವಿದ್ಯಾರ್ಥಿಗಳು ಹಾಗೂ ಪೋಷಕರು ಬೆಂಗಳೂರಿನ ಮಲ್ಲೇಶ್ವರಂನ ಪಿಯು ಮಂಡಳಿ ಕಛೇರಿ ಎದುರು ಪ್ರತಿಭಟನೆ ನಡೆಸುತ್ತಿದ್ದಾರೆ.
ಪೊಲೀಸರು ಪ್ರತಿಭಟನೆ ತಡೆಯಲು ಮುಂದಾದಾಗ ಉದ್ರಿಕ್ತಗೊಂಡ ವಿದ್ಯಾರ್ಥಿಗಳು, ಪಿಯು ಮಂಡಳಿಯ ಕಛೇರಿಗೆ ನುಗ್ಗಿ ಪೀಠೋಪಕರಣಗಳನ್ನು ಧ್ವಂಸಗೊಳಿಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಅಲ್ಲದೇ ಪೊಲೀಸರು ಹಾಗೂ ವಿದ್ಯಾರ್ಥಿಗಳು, ಪೋಷಕರ ನಡುವೆ ವಾಗ್ದಾವ ಆರಂಭವಾಗಿದೆ.
ಪ್ರತಿಭಟನಾ ಸ್ಥಳಕ್ಕೆ ಪಿಯು ಬೋರ್ಡ್ ನಿರ್ದೇಶಕಿ ಸುಷಮಾ ಗೋಡಬೋಲೆ ಆಗಮಿಸಿದ್ದು, ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಹಾಗೂ ಪೋಷಕರು ಸುಷಮಾ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಹಲವಾರು ವೆಬ್ ಸೈಟ್‌ನಲ್ಲಿ ಪ್ರಕಟವಾಗಿರುವ ದ್ವಿತೀಯ ಪಿಯುಸಿ ಫಲಿತಾಂಶಗಳು ಗೊಂದಲಗಳಿಗೆ ಎಡೆಮಾಡಿಕೊಟ್ಟಿದೆ. ಒಂದರಲ್ಲಿ ಫೇಲ್, ಇನ್ನೊಂದರಲ್ಲಿ ಪಾಸ್, ಮತ್ತೂಂದರಲ್ಲಿ ಗೈರು, ಮಗದೊಂದರಲ್ಲಿ ವಿದ್ಯಾರ್ಥಿ ತೆಗೆದುಕೊಳ್ಳದ ವಿಷಯಕ್ಕೂ ಫಲಿತಾಂಶ ಪ್ರಕಟವಾಗಿರುವುದು ಹೀಗೆ ಬೇರೆ ಬೇರೆ ವೆಬ್‌ಸೈ ಟ್‌ಗಳಲ್ಲಿ ಬೇರೆ ಬೇರೆ ರೀತಿಯ ಫಲಿತಾಂಶಗಳು ಪ್ರಕಟವಾಗಿರುವುದು ಒಂದೆಡೆಯಾದರೆ. ಮತ್ತೂಂದೆಡೆ ಅನೇಕ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರೂ ಗೈರು ಹಾಜರಿ ಎಂದು ಫಲಿತಾಂಶ ಬಂದಿದೆ.
ಇದಲ್ಲದೆ, ಕೆಲ ವಿದ್ಯಾರ್ಥಿಗಳು ಐದು ವಿಷಯಗಳಲ್ಲಿ ಶೇ.80ರಿಂದ 90ರಷ್ಟು ಅಂಕಗಳಿಸಿದ್ದರೂ ಒಂದು ಪರೀಕ್ಷೆಯಲ್ಲಿ ಬೆರಳೆಣಿಕೆಯಷ್ಟು ಅಂಕ ನೀಡಲಾಗಿದೆ. ಹೀಗೆ ಹತ್ತಾರು ರೀತಿಯ ಸಮಸ್ಯೆಗಳು ಈ ಬಾರಿಯ ಫಲಿತಾಂಶದಲ್ಲಿ ಉಂಟಾಗಿದೆ. ಇಂತಹ ನಾನಾ ಸಮಸ್ಯೆಗಳಿಗೆ ಸಿಲುಕಿದ ವಿದ್ಯಾರ್ಥಿಗಳು, ಪೋಷಕರು ಪದವಿ ಪೂರ್ವ ಶಿಕ್ಷಣ ಇಲಾಖೆ ಕಚೇರಿಗೆ ಮುಗಿಬಿದ್ದಿದ್ದಾರೆ.
ವಿಪರ್ಯಾಸ ಎಂದರೆ ಇಲಾಖೆಯ ನಿರ್ದೇಶಕಿ ಸುಷಮಾ ಗೋಡಬೋಲೆ, ಜಂಟಿ ನಿರ್ದೇಶಕ ರಿತ್ತಿ ಸೇರಿದಂತೆ ಪ್ರಮುಖ ಅಧಿಕಾರಿಗಳು ವಿದ್ಯಾರ್ಥಿಗಳ, ಹೆತ್ತವರ ಸಮಸ್ಯೆ ಆಲಿಸಿ ಸಮರ್ಪಕವಾಗಿ ಪರಿಹರಿಸುವ ಕೆಲಸ ಮಾಡುತ್ತಿಲ್ಲ.