ವಾಷಿಂಗ್ಟನ್ : ಕಳೆದ ಜನವರಿಯಲ್ಲಿ ತಾವು ಭಾರತಕ್ಕೆ ಭೇಟಿ ನೀಡಿದ್ದು, ಆ ಭೇಟಿಯ ವೇಳೆ ಪ್ರಧಾನಿ ನರೇಂದ್ರ ಮೋದಿಯವರೊಂದಿಗಿನ ಗೆಳೆತನದ ಒಡನಾಟಗಳ ಸವಿನೆನಪುಗಳನ್ನು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಮತ್ತೊಮ್ಮೆ ಮೆಲುಕು ಹಾಕಿ ಸಂತಸಪಟ್ಟರು.
ಭಾರತದ ನೂತನ ರಾಯಭಾರಿಯಾಗಿರುವ ಅರುಣ್ ಸಿಂಗ್ ಅವರು ಒಬಾಮಾ ಅವರ ಕಚೇರಿಯಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದ ಸಂದರ್ಭದಲ್ಲಿ ಒಬಾಮ ತಮ್ಮ ಭಾರತ ಭೇಟಿ ಮತ್ತು ನರೇಂದ್ರ ಮೋದಿಯವರ ಗೆಳೆತನ, ಅವರೊಂದಿಗಿನ ಮಾತುಕತೆ, ಆತಿಥ್ಯ, ಊಟ-ಉಪಚಾರಗಳನ್ನು ಸ್ಮರಿಸಿದರು.
ಪ್ರಧಾನಿ ಮೋದಿ ಮತ್ತು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ತಮ್ಮನ್ನು ಮತ್ತು ಪತ್ನಿ ಮಿಶೇಲ್ ಒಬಾಮಾರನ್ನು ಆತ್ಮೀಯವಾಗಿ ಸ್ವಾಗತಿಸಿದ್ದು, ಸ್ನೇಹದ ಮಾತುಗಳು ಹಾಗೂ ಒಡನಾಟಗಳನ್ನು ಸ್ಮರಿಸಿದರು ಎಂದು ರಾಯಭಾರಿ ಅರುಣ್ ಸಿಂಗ್ ಅಧ್ಯಕ್ಷರ ಭೇಟಿಯ ನಂತರ ಮಾಧ್ಯಮಗಳಿಗೆ ತಿಳಿಸಿದರು.