ದಾವಣಗೆರೆ : ಬಿಜೆಪಿ ಕಾಂಗ್ರೆಸ್ ಮುಕ್ತ ಕರ್ನಾಟಕದ ಕನಸು ಕಾಣುತ್ತಿದೆ. ಆದರೆ ಅದು ಎಂದಿಗೂ ಈಡೇರುವುದಿಲ್ಲ. 2018ರ ಚುನಾವಣೆಗೆ ಕಾಂಗ್ರೆಸ್ ಕಾರ್ಯಕರ್ತರೆಲ್ಲ ಪಣ ತೊಟ್ಟು ಬಿಜೆಪಿ ಮುಕ್ತ ಕರ್ನಾಟಕ ನಿರ್ಮಾಣಮಾಡಲಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪದಿಸಿದ್ದಾರೆ.
ದಾವಣಗೆರೆಯಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷ ಪೂರಿಅಸಿದ ಹಿನ್ನಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಸರ್ವೋದಯ ಸಮಾವೇಶದಲ್ಲಿ ಮಾತನಾಡಿದ ಸಿಎಂ, ಇದೊಂದು ಐತಿಹಾಸಿಕ ಸಮಾವೇಶ, ಮೇ 13ಕ್ಕೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದು 2ವರ್ಷ ಪೂರೈಸಿದೆ. ನಾವು ನುಡಿದಂತೆ ನಡೆದಿದ್ದೇವೆ. ಚುನಾವಣೆ ಸಂದರ್ಭದಲ್ಲಿ ಕೊಟ್ಟ ಭರವಸೆಗಳನ್ನು ಈಡೇರಿಸಿದ್ದೇವೆ. ಬಡವರು, ದಲಿತರು, ಹಿಂದುಳಿದವರನ್ನು ಸಾಮಾಜಿಕವಾಗಿ, ಶೈಕ್ಷಣಿವಾಗಿ ಮುಂದೆ ತರುವುದಾಗಿ ಈ ಸಂದರ್ಭದಲ್ಲಿ ಭರವಸೆ ನೀಡಿದರು.
ಬಡವರಿಗೆ ಅಕ್ಕಿ ಕೊಟ್ಟರೆ, ಕೂಲಿ ಕೆಲಸಕ್ಕೆ ಜನ ಸಿಗುವುದಿಲ್ಲ ಎಂದು ಲೇವಡಿ ಮಾಡುತ್ತಾರೆ. ಇಷ್ಟು ವರ್ಷ ದುಡಿದವರು ಸ್ವಲ್ಪ ದಿನ ವಿಶ್ರಾಂತಿ ತೆಗೆದುಕೊಳ್ಳಲಿ ಎಂದು ತಿರುಗೇಟು ನೀಡಿದ್ದೇನೆ ಎಂದು ಸಮರ್ಥಿಸಿಕೊಂಡರು. ಬಿಜೆಪಿಯವರು ಅಧಿಕಾರ ನಡೆಸಿದಾಗ ಶಾಸಕರು, ಸಚಿವರು ಸೇರಿ 13 ಜನ ಜೈಲಿಗೆ ಹೋಗಿದ್ದರು. ನಮ್ಮ ಸರ್ಕಾರದಲ್ಲಿ ಅಂಥ ಯಾವ ಆರೋಪ, ಹಗರಣಗಳು ಇಲ್ಲ. ಜನ ಪ್ರೀತಿಯಿಂದ ಆಶೀರ್ವಾದ ಮಾಡಿದ್ದಾರೆ. ನಮ್ಮ ಸರ್ಕಾರ ಅದಕ್ಕೆ ತಕ್ಕಂತೆ ಬಡವರ, ಶೋಷಿತರ ಪರವಾದ ಯೋಜನೆಗಳನ್ನು ರೂಪಿಸುತ್ತಿದೆ. ಮುಂದಿನ ಚುನಾವಣೆಯಲ್ಲೂ ನಮ್ಮನ್ನು ಆಶೀರ್ವದಿಸುತ್ತಾರೆ ಎಂದು ಹೇಳಿದರು.
ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅಧಿಕಾರಕ್ಕೆ ಬಂದು ವರ್ಷ ಕಳೆದರೂ ಪ್ರಣಾಳಿಕೆಯಲ್ಲಿನ ಒಂದು ಭರವಸೆಯನ್ನೂ ಈಡೇರಿಸಿಲ್ಲ. ನಮ್ಮ ಎರಡು ವರ್ಷಗಳ ಅಧಿಕಾರಾವಧಿಯಲ್ಲಿ ಕಾಂಗ್ರೆಸ್ ಹೇಳಿದ್ದ 165 ಭರವಸೆಗಳ ಪೈಕಿ 100ಕ್ಕೂ ಹೆಚ್ಚು ಭರವಸೆಗಳನ್ನು ಈಡೇರಿಸಿದ್ದೇವೆ. ಬಿಜೆಪಿ ಮಾಡಿರುವ ಸಾಲವನ್ನು ತೀರಿಸಿದ್ದೇವೆ. ಕೃಷಿ, ನೀರಾವರಿ, ಕೈಗಾರಿಕೆ, ದಲಿತರ ಅಭಿವೃದ್ಧಿ ಸೇರಿದಂತೆ ನಾನಾ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ನಮ್ಮದು ಅಹಿಂದ ಸರ್ಕಾರ ಎಂದು ಹೇಳಿಕೊಳ್ಳಲು ಮುಜುಗರ ಪಡುವುದಿಲ್ಲ ಎಂದು ಅಭಿಪ್ರಾಯಪಟ್ಟರು.
ಅಲ್ಲದೇ ರಾಜ್ಯವನ್ನು ಕಾಂಗ್ರೆಸ್ ಮುಕ್ತ ಮಾಡುತ್ತೇನೆ ಎಂದು ಬಿಜೆಪಿ ಹೇಳಿದೆ. ಆ ಕಾರಣಕ್ಕಾಗಿಯೇ ನಾನು ನನ್ನ ನಿರ್ಧಾರವನ್ನು ಕೈಬಿಟ್ಟು, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ಸ್ಪರ್ಧಿಸಲು ನಿಶ್ಚಯಿಸಿದ್ದೇನೆ. ಯಾವುದೇ ಕಾರಣಕ್ಕೂ ಕೋಮುವಾದಿ ಬಿಜೆಪಿ ಪಕ್ಷ ಅಧಿಕಾರಕ್ಕೆ ಏರಲು ಬಿಡಲ್ಲ ಎಂದು ತಿಳಿಸಿದರು.