ಶಾಂಘೈ : ನನ್ನಿಂದ ಯಾವುದೇ ತಪ್ಪಾಗದಂತೆ, ದೇಶಕ್ಕೆ ನಷ್ಟವಾಗದಂತೆ ನಿಮ್ಮ ಎರಡು ಕೈಗಳನ್ನು ಮೇಲಕ್ಕೆತ್ತಿ ನನಗೆ ಆಶೀರ್ವಾದ ಮಾಡಿ....ಇದು ಚೀನಾದ ಶಾಂಘೈನಲ್ಲಿ ಪ್ರಧಾನಿ ಮೋದಿ ಅನಿವಾಸಿ ಭಾರತೀಯರನ್ನುದ್ದೇಶಿಸಿ ಮಾತನಾಡಿದ ಪರಿ.
ಮೊದಲು ನೀವು ಭಾರತೀಯರು ಎಂದು ಹೇಳಿಕೊಳ್ಳಲು ಸಂಕೋಚ ಪಡುತ್ತಿದ್ದೀರಿ. ಆದರೆ ಈಗ ನಾವು ಭಾರತೀಯರು ಎಂದು ಹೇಳಿಕೊಳ್ಳುತ್ತಿದ್ದೀರಿ. ಇಂದು ಇಡೀ ಪ್ರಪಂಚವೇ ಭಾರತದತ್ತ ತಿರುಗಿ ನೋಡುತ್ತಿದೆ ಎಂದರು.
ಚೀನಾದ ಅಧ್ಯಕ್ಷರು ಯಾವತ್ತೂ ತಮ್ಮ ಪ್ರೋಟೋಕಾಲ್ ಬಿಟ್ಟು ಬೀಜಿಂಗ್ ಹೊರಗೆ ಯಾವುದೇ ಪ್ರಧಾನಿಯನ್ನು ಸ್ವಾಗತಿಸಿದ್ದಿಲ್ಲ. ಆದರೆ ಈ ಬಾರಿ ಚೀನಾ ಅಧ್ಯಕ್ಷರು ನನ್ನ ಅವರೇ ಖುದ್ದಾಗಿ ಅವರ ತವರೂರಿನಲ್ಲೇ ಅದ್ದೂರಿಯಾಗಿ ಸ್ವಾಗತಿಸಿದರು. ಇದು 125 ಕೋಟಿ ಭಾರತೀಯರಿಗೆ ಸಂದ ಗೌರವವಾಗಿದೆ ಎಂದು ಹೇಳಿದರು.
ಇಡೀ ವಿಶ್ವವೇ ಒಂದು ಕುಟುಂಬ. ಇಂದು ಇಡೀ ಜಗತ್ತೇ ಭಾರತ ಮತ್ತು ಚೀನಾದತ್ತ ನೋಡುತ್ತಿದೆ. ಭಾರತದ ಅಭಿವೃದ್ಧಿಯ ವೇಗ ಕಂಡು ಅಚ್ಚರಿ ಪಡುತ್ತಿದೆ ಎಂದರು.
ಕಳೆದ ವರ್ಷ ಭಾರತೀಯರು ಇದೇ (ಮೇ 16) ದಿನ ಅಭೂತಪೂರ್ವ ಫಲಿತಾಂಶ ಕಂಡಿದ್ದರು. ಭಾರತೀಯರು ನಿರೀಕ್ಷಿಸದ ಫಲಿತಾಂಶ ಬಂದಿತ್ತು. ನಾನು ಅಂದು ನೀಡಿದ್ದ ಭರವಸೆಗಳನ್ನು ಈಡೇರಿಸಿದ್ದೇನೆ. ನಾಳೆ ನಾನು ಮುಂಗೋಲಿಯಾಕ್ಕೆ ಭೇಟಿ ನೀಡುತ್ತಿದ್ದೇನೆ. ನಾಳೆ ಭಾನುವಾರ ನಿಮಗೆಲ್ಲ ರಜೆ. ಆದರೆ ನನಗೆ ಭಾನುವಾರ ಸೇರಿದಂತೆ ನಾನು ಯಾವುದೇ ರಜೆ ತೆಗೆದುಕೊಳ್ಳದೇ ಕೆಲಸ ಮಾಡುತ್ತಿದ್ದೇನೆ ಎಂದು ತಿಳಿಸಿದರು.