ಲಖ್ನೌ : 'ಇಸ್ಲಾಮ್' ನ್ನು ಸಮರ್ಥಿಸಿಕೊಳ್ಳುವ ನಿಟ್ಟಿನಲ್ಲಿ ಬೃಹತ್ ರ್ಯಾಲಿ ನಡೆಸಬೇಕೆಂದು ದಾರುಲ್ ಉಲೂಮ್ ಸಂಘಟನೆ ಪ್ರಮುಖ ಮುಸ್ಲಿಮ್ ಮೌಲ್ವಿ, ಮಾಜಿ ಸಂಸದ ಮಹಮೂದ್ ಮದನಿಗೆ ಫತ್ವಾ ಹೊರಡಿಸಿದೆ.
ಜಮೀಯತ್ ಉಲೆಮ-ಇ-ಹಿಂದ್ ಸಂಘಟನೆಯ ಮುಖ್ಯಸ್ಥರಾಗಿರುವ ಮಹಮೂದ್ ಮದನಿಗೆ ದೇಶಾದ್ಯಂತ ಹಿಂಬಾಲಕರಿದ್ದು, ನರೇಂದ್ರ ಮೋದಿ ಆಡಳಿತದಲ್ಲಿ ಇಸ್ಲಾಮ್ ನ್ನು ಸಮರ್ಥಿಸಿಕೊಳ್ಳುವುದಕ್ಕಾಗಿ ಯೋಜನೆ ರೂಪಿಸಬೇಕೆಂದು ದಾರುಲ್ ಉಲೂಮ್ ಸಂಘಟನೆ ಫತ್ವಾ ಹೊರಡಿಸಿದೆ. ಫತ್ವಾ ಹೊರಡಿಸಿರುವ ಸಂಘಟನೆ ಸುನ್ನಿ ಪಂಥದ ಹಿಂಬಾಲಕರನ್ನು ಹೊಂದಿದೆ.
ತಮಗೆ ವಿಧಿಸಿರುವ ಫತ್ವಾವನ್ನು ಈಡೇರಿಸುವ ಸಂಬಂಧ ಹಮ್ಮಿಕೊಳ್ಳುವ ಕಾರ್ಯಕ್ರಮದ ಬಗ್ಗೆ ಮಹಮೂದ್ ಮದನಿ ಸಂಪೂರ್ಣ ವಿವರ ನೀಡಲಿದ್ದಾರೆ ಎಂದು ತಿಳಿದುಬಂದಿದೆ. ಸದ್ಯದಲ್ಲೇ ನಡೆಯಲಿರುವ ರ್ಯಾಲಿಯಲ್ಲಿ ದೇಶಾದ್ಯಂತ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ದಾಳಿ, ಘರ್ ವಾಪಸಿ ಬಗ್ಗೆ ಮಹಮೂದ್ ಮದನಿ ಪ್ರಸ್ತಾಪ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.
ತಮ್ಮ ಯೋಜನೆಗಳ ಬಗ್ಗೆ ಮಾತನಾಡಿರುವ ಮಹಮೂದ್ ಮದನಿ, ನರೇಂದ್ರ ಮೋದಿ ಸರ್ಕಾರ ಅಸ್ಥಿತ್ವಕ್ಕೆ ಬಂದು ಒಂದು ವರ್ಷವಾಗಿದೆ. ಕೆಲವೊಂದು ವಿಚಾರಗಳ ಬಗ್ಗೆ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಬೇಕಿದೆ ಎಂದು ಹೇಳಿದ್ದಾರೆ. ಧಾರ್ಮಿಕ ಸ್ವಾತಂತ್ರ್ಯ ಎಂಬುದು ಭಾರತದ ಘನತೆಗೆ ಸಂಬಂಧಿಸಿದ ವಿಷಯವಾಗಿದೆ. ಧಾರ್ಮಿಕ ಸ್ವಾತಂತ್ರ್ಯವಿಲ್ಲದೇ ಭಾರತ ಉಳಿಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
2014ರ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಲ್ಪಸಂಖ್ಯಾತರ ವಿರೋಧಿಯಂತೆ ಬಿಂಬಿಸಿ ಕಾಂಗ್ರೆಸ್ ಲಾಭ ಪಡೆದುಕೊಳ್ಳುತ್ತಿದೆ ಎಂದು ಮಹಮೂದ್ ಮದನಿ ಹೇಳಿಕೆ ನೀಡಿದ್ದರು.