ನವದೆಹಲಿ : ಕೇಂದ್ರ ಎನ್.ಡಿ.ಎ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಮಾಹಿತಿ ಹಕ್ಕು ಕಾಯ್ದೆ(ಆರ್.ಟಿ.ಐ)ಯನ್ನು ದುರ್ಬಲಗೊಳಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಲೋಕಸಭೆಯಲ್ಲಿ ಮಾತನಾಡಿದ ಸೋನಿಯಾ ಗಾಂಧಿ, ನರೇಂದ್ರ ಮೋದಿ ಅವರು ಎಲ್ಲಾ ಅಧಿಕಾರ ತಮ್ಮ ಬಳಿಯೇ ಇರಬೇಕು ಎಂದು ಬಯಸುತ್ತಾರೆ. ಹೀಗಾಗಿಯೇ ಅವರು ಆರ್.ಟಿ.ಐ ಕಾಯ್ದೆಯನ್ನು ರದ್ದುಗೊಳಿಸಲು ಮುಂದಾಗಿದ್ದಾರೆ ಎಂದರು.
ಪಾರದರ್ಶಕತೆ ವಿಷಯದಲ್ಲಿ ನರೇಂದ್ರ ಮೋದಿ ಅವರು ಹೊಣೆಗಾರಿಕೆಯಿಂದ ನುಣುಚಿಕೊಳ್ಳುತ್ತಿದ್ದು, ಲೋಕಪಾಲ, ಮುಖ್ಯ ಮಾಹಿತಿ ಆಯುಕ್ತರ ಹಾಗೂ ಕೇಂದ್ರೀಯ ಜಾಗೃತದಳದ ಮುಖ್ಯಸ್ಥರ ಹುದ್ದೆಗಳ ನೇಮಕಗಳನ್ನು ಉದ್ದೇಶಪೂರ್ವಕವಾಗಿಯೇ ಖಾಲಿ ಉಳಿಸಿದ್ದಾರೆ ಕಿಡಿಕಾರಿದರು.
ಮುಖ್ಯ ಮಾಹಿತಿ ಆಯುಕ್ತರ ಸ್ಥಾನ ಕಳೆದ 8 ತಿಂಗಳಿನಿಂದ ಖಾಲಿ ಬಿದ್ದಿದೆ. ಮೂರು ಮಾಹಿತಿ ಆಯುಕ್ತರ ಸ್ಥಾನಗಳು ಕಳೆದ ಒಂದು ವರ್ಷದಿಂದ ಭರ್ತಿಯಾಗದೆ ಉಳಿದಿವೆ. ಇದರಿಂದಾಗಿ 39 ಸಾವಿರ ಪ್ರಕರಣಗಳು ವಿಲೇವಾರಿಗೆ ಕಾದು ಕುಳಿತಿವೆ ಎಂದು ಅಂಕಿ–ಅಂಶ ಸಮೇತ ಸದನಕ್ಕೆ ತಿಳಿಸಿದರು.