ನವದೆಹಲಿ : ವಿದೇಶಿ ದೇಣಿಗೆ ಸ್ವೀಕರಿಸುತ್ತಿರುವ ಎನ್.ಜಿ.ಒಗಳ ಬಗ್ಗೆ ಮತ್ತಷ್ಟು ಮಾಹಿತಿ ಹೊರಬಿದ್ದಿದೆ. ಯು.ಎಸ್ ಮೂಲದ ಫೋರ್ಡ್ ಫೌಂಡೇಶನ್ ರಾಜಕೀಯ ಪಕ್ಷಕ್ಕೆ ಹಾಗೂ ಲಾಭದ ಉದ್ದೇಶ ಇಟ್ಟುಕೊಂಡು ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಗಳಿಗೆ ಅಕ್ರಮವಾಗಿ, ದೇಣಿಗೆ ನೀಡುತ್ತಿದೆ ಎಂಬುದು ತನಿಖೆ ಮೂಲಕ ಬಹಿರಂಗವಾಗಿದೆ.
ಫೋರ್ಡ್ ಫೌಂಡೇಷನ್ ವಹಿವಾಟಿನ ಬಗ್ಗೆ ನಿಗಾ ವಹಿಸಲು ಕೇಂದ್ರ ಸರ್ಕಾರ ಆದೇಶ ನೀಡಿದ್ದ ಹಿನ್ನೆಲೆಯಲ್ಲಿ ತನಿಖೆ ನಡೆಯುತ್ತಿದ್ದು, ಫೋರ್ಡ್ ಸಂಸ್ಥೆಯಿಂದ ಪ್ರಮುಖ ರಾಜಕೀಯ ಪಕ್ಷಕ್ಕೂ ಸಹ ದೇಣಿಗೆ ಸಂದಾಯವಾಗುತ್ತಿದೆ ಎಂಬ ಅಂಶ ಬಯಲಾಗಿದೆ. ಈ ಬಗ್ಗೆ ಮಾಹಿತಿ ನೀಡಿರುವ ಕೇಂದ್ರ ಗೃಹ ಸಚಿವಾಲಯದ ಅಧಿಕಾರಿಯೊಬ್ಬರು, ಎನ್.ಜಿ.ಒ ಮೂಲಕ ಫೋರ್ಡ್ ಫೌಂಡೇಷನ್ ನ ಹಣ ರಾಜಕೀಯ ಪಕ್ಷಕ್ಕೆ ತಲುಪಿದೆ, ಆದರೆ ಈ ಆರೋಪವನ್ನು ಫೋರ್ಡ್ ಫೌಂಡೇಷನ್ ತಳ್ಳಿಹಾಕಿದೆ ಎಂದು ಹೇಳಿದ್ದಾರೆ.
ಎನ್.ಜಿ.ಒ ಕೆಟಗರಿ ವ್ಯಾಪ್ತಿಗೆ ಬರದ ಅದೆಷ್ಟೋ ಸಂಸ್ಥೆಗಳಿಗೆ ಫೋರ್ಡ್ ಫೌಂಡೇಷನ್ ದೇಣಿಗೆ ನೀಡಿದ್ದು ಈ ಮೂಲಕ ಸಂಸ್ಥೆಗಳು ಲಾಭ ಮಾಡಿಕೊಳ್ಳುತ್ತಿವೆ ಎಂದು ಅಧಿಕಾರಿ ತಿಳಿಸಿದ್ದಾರೆ. ರಾಜಕೀಯ ಪಕ್ಷಕ್ಕೆ ದೇಣಿಗೆ ನೀಡಿರುವ ಬಗ್ಗೆ ಕೇಳಿಬಂದಿರುವ ಆರೋಪವನ್ನು ತಳ್ಳಿ ಹಾಕಿರುವ ಫೋರ್ಡ್ ಫೌಂಡೇಷನ್, ತಾವು ಎನ್.ಜಿ.ಒ ಗಳೊಂದಿಗೆ ಮಾತ್ರ ಕಾರ್ಯನಿರ್ವಹಿಸುತ್ತಿದ್ದೇವೆ ಎಂದು ಹೇಳಿದೆ.
ಎಫ್.ಸಿ.ಆರ್ ಕಾಯ್ದೆಯಡಿ ಯಾವುದೇ ದಾನಿ ಲಾಭ ಮಾಡಿಕೊಳ್ಳುವ ರಾಜಕೀಯ ಪಕ್ಷ ಅಥವಾ ಸಂಸ್ಥೆಗಳಿಗೆ ದೇಣಿಗೆ ನೀಡುವಹಾಗಿಲ್ಲ. ಸದ್ಯಕ್ಕೆ ಫೋರ್ಡ್ ಫೌಂಡೇಷನ್ ನ್ನು ಕೇಂದ್ರ ಗೃಹ ಸಚಿವಾಲಯ ವಾಚ್ ಲಿಸ್ಟ್ ಗೆ ಸೇರಿಸಿದೆ. ಈ ಹಿಂದೆ ಆಮ್ ಆದ್ಮಿ ಪಕ್ಷದ ವಿರುದ್ಧ ಫೋರ್ಡ್ ಫೌಂಡೇಷನ್ ನಿಂದ ಹಣ ಪಡೆದಿರುವ ಆರೋಪ ಕೇಳಿಬಂದಿತ್ತು.