ನವದೆಹಲಿ : ಭಾರತ ಉಪಖಂಡದ ಅಲ್ ಖೈದಾ ಉಗ್ರಗಾಮಿ ಸಂಘಟನೆ ತನ್ನ ಹಿಟ್ ಲಿಸ್ಟ್ ನಲ್ಲಿ ಪ್ರಧಾನಿ ಮೋದಿಯವರನ್ನು ಟಾರ್ಗೆಟ್ ಮಾಡಿರುವ ವಿಡಿಯೋವನ್ನು ಬಿಡುಗಡೆ ಮಾಡಿದೆ.
ಫ್ರಾನ್ಸ್ ಟು ಬಾಂಗ್ಲಾದೇಶ್ ಟೈಟಲ್ ನಲ್ಲಿ ಭಾರತ ಉಪಖಂಡದ ಅಲ್ ಖೈದಾ ಮುಖ್ಯಸ್ಥ ಮೌಲಾನಾ ಅಸೀಮ್ ಉಮರ್ ಮೇ 2ರಂದು ಈ ವೀಡಿಯೋವನ್ನು ಬಿಡುಗಡೆ ಮಾಡಿದ್ದಾನೆ. ಉಗ್ರರ ವಿರುದ್ಧ ಹೋರಾಡಬೇಕೆಂಬ ಪ್ರಧಾನಿ ಮೋದಿ ಕರೆ ಬಗ್ಗೆ ವೀಡಿಯೋದಲ್ಲಿ ಆಕ್ರೋಶ ವ್ಯಕ್ತಪಡಿಸಲಾಗಿದೆ ಎಂದು ತಿಳಿದುಬಂದಿದೆ.
ವೀಡಿಯೋದಲ್ಲಿ ವಿಶ್ವಬ್ಯಾಂಕ್, ಐಎಂಎಫ್ ನೀತಿಗಳು, ಡ್ರೋನ್ ದಾಳಿ, ಚಾರ್ಲೆ ಹೆಬ್ಡೋ ಬರಹ, ಮೋದಿ ಸೇರಿದಂತೆ ಹಲವು ವಿಷಯಗಳ ಬಗ್ಗೆ ಉಮರ್ ವಾಗ್ದಾಳಿ ನಡೆಸಿದ್ದಾನೆ. ಈ ವೀಡಿಯೋ ಮತ್ತು ವರದಿ ಬಗ್ಗೆ ಪರಿಶೀಲನೆ ನಡೆಸುತ್ತಿರುವುದಾಗಿ ಭಾರತೀಯ ಗುಪ್ತಚರ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಅಷ್ಟೇ ಅಲ್ಲ ಕಳೆದ ಫೆಬ್ರುವರಿ ತಿಂಗಳಿನಲ್ಲಿ ಢಾಕಾದಲ್ಲಿ ಅಜಿತ್ ರಾಯ್ ಹತ್ಯೆ ಸೇರಿದಂತೆ ಪಾಕಿಸ್ತಾನ, ಬಾಂಗ್ಲಾದಲ್ಲಿನ ಹಲವು ಜಾತ್ಯತೀತ ಲೇಖಕರ ಹತ್ಯೆಯ ಹೊಣೆಯನ್ನು ಭಾರತ ಉಪಖಂಡದ ಅಲ್ ಖೈದಾ ಹೊತ್ತುಕೊಂಡಿದೆ.
ಭಾರತ ಉಪಖಂಡದಲ್ಲಿ ಖ್ವೆದಾತ್ ಅಲ್ ಜಿಹಾದ್ ಎಂಬ ಹೊಸ ಶಾಖೆಯನ್ನು ಅಲ್ ಖೈದಾ ವರಿಷ್ಠ ಅಲ್ ಜವಾಹರಿ ಕಳೆದ ವರ್ಷ ಘೋಷಿಸಿದ್ದ. ಜಿಹಾದ್ ಹೆಸರಿನಲ್ಲಿ ಧ್ವಜ ಹಾರಾಟ, ಭಾರತದಾದ್ಯಂತ ಇಸ್ಲಾಮ್ ಆಡಳಿತ ಜಾರಿಗೆ ಬರಬೇಕೆಂಬ ನಿಲುವು ಭಾರತ ಅಲ್ ಖೈದಾದದ ಉದ್ದೇಶವಾಗಿದೆ ಎಂದು ವರದಿ ವಿವರಿಸಿದೆ.