ನವದೆಹಲಿ : 'ರಾಹುಲ್ ಗಾಂಧಿ' ಅವರಿಗೆ ಕಾಂಗ್ರೆಸ್ ನಲ್ಲಿ ಅತ್ಯುನ್ನತ ಹುದ್ದೆ ನೀಡುವ ವಿಷಯ ಮತ್ತೆ ಚರ್ಚೆಗೆ ಬಂದಿದೆ. ಈ ಬಗ್ಗೆ ಪಕ್ಷದ ಹಿರಿಯ ಮುಖಂಡರೊಂದಿಗೆ ಚರ್ಚಿಸಲು ಮೇ.6ರಂದು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಸಭೆ ಕರೆದಿದ್ದಾರೆ.
ನವದೆಹಲಿಯಲ್ಲಿರುವ ಸೋನಿಯಾ ಗಾಂಧಿ ನಿವಾಸದಲ್ಲೇ ಕಾಂಗ್ರೆಸ್ ಕಾರ್ಯಕಾರಿಣಿ ಸಭೆ ನಡೆಯಲಿದ್ದು ರಾಹುಲ್ ಗಾಂಧಿಗೆ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ನೀಡುವುದರ ಬಗ್ಗೆ ಕಾಂಗ್ರೆಸ್ ನ ಹಿರಿಯ ಮುಖಂಡರ ಅಭಿಪ್ರಾಯವನ್ನು ಸಂಗ್ರಹಿಸಲಿದ್ದಾರೆ. ಸೋನಿಯಾ ಗಾಂಧಿ ಆಯೋಜಿಸಿರುವ ಔತಣ ಕೂಟದಲ್ಲಿ ಕಾಂಗ್ರೆಸ್ ಸಂಸದರೂ ಸಹ ಭಾಗವಹಿಸಲಿದ್ದಾರೆ.
ಸಭೆ ನಡೆಸುವ ಬಗ್ಗೆ ಈವರೆಗೂ ನಿಖರ ಕಾರಣ ತಿಳಿದಿಲ್ಲವಾದರೂ ರಾಹುಲ್ ಗಾಂಧಿಗೆ ಉನ್ನತ ಹುದ್ದೆ ನೀಡುವ ಕುರಿತು ಸಮಾಲೋಚನೆ ನಡೆಸುವುದಕ್ಕಾಗಿಯೇ ಸಭೆ ಕರೆಯಲಾಗಿದೆ ಎಂದು ಹೇಳಲಾಗಿದೆ.
ಮೇ.5ರಂದು ಕಾಂಗ್ರೆಸ್ ನ ಸಂಸದರೂ ಸಹ ಪ್ರತ್ಯೇಕವಾಗಿ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಲಿದ್ದಾರೆ. ಸುದೀರ್ಘ ವಿದೇಶ ಪ್ರವಾಸ ಮುಕ್ತಾಯಗೊಳಿಸಿ ವಾಪಸ್ಸಾಗಿರುವ ರಾಹುಲ್ ಗಾಂಧಿ ಇತ್ತೀಚಿನ ದಿನಗಳಲ್ಲಿ ಚಟುವಟಿಕೆಯಿಂದಿದ್ದಾರೆ. ಈ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿಗೆ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ನೀಡುವ ಪ್ರಸ್ತಾಪ ಮುಂದಾಗಿದೆ.