ನವದೆಹಲಿ : ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್(ಎಸ್.ಪಿ.ಪಿ) ಭವಾನಿಸಿಂಗ್ ಅವರ ನೇಮಕವನ್ನು ಸುಪ್ರೀಂ ಕೋರ್ಟ್ ವಿಸ್ತೃತ ಪೀಠ ಅಸಿಂಧುಗೊಳಿಸಿದೆ.
ಎಸ್.ಪಿ.ಪಿ ಭವಾನಿಸಿಂಗ್ ನೇಮಕವನ್ನು ಪ್ರಶ್ನಿಸಿ ಡಿಎಂಕೆ ಪ್ರಧಾನ ಕಾರ್ಯದರ್ಶಿ ಕೆ ಅನ್ಬುಗನ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ, ಜಯಲಲಿತಾ ಅವರ ಪ್ರಕರಣದಲ್ಲಿ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಅನ್ನು ನೇಮಿಸುವ ಅಧಿಕಾರ ತಮಿಳುನಾಡು ಸರ್ಕಾರಕ್ಕೆ ಇಲ್ಲ. ಕರ್ನಾಟಕ ಸರ್ಕಾರವೇ ಎಸ್.ಪಿ.ಪಿ ನೇಮಕ ಮಾಡಬೇಕಿತ್ತು ಎಂದು ಹೇಳಿದೆ. ಆದರೆ ಪ್ರಕರಣದ ತೀರ್ಪಿಗೆ ತಡೆ ನೀಡಲು ನಿರಾಕರಿಸಿದೆ.
ಅಲ್ಲದೆ ಭವಾನಿ ಸಿಂಗ್ ಬದಲಾಗಿ ಮತ್ತೊಬ್ಬ ಎಸ್ ಪಿಪಿಯನ್ನು ನೇಮಕ ಮಾಡದೇ ಇದ್ದದ್ದು ಮತ್ತು ಈ ಬಗ್ಗೆ ಯಾವುದೇ ಉತ್ತರ ಸಲ್ಲಿಸದೇ ಇದ್ದ ಕರ್ನಾಟಕ ಸರ್ಕಾರದ ಧೋರಣೆಯನ್ನೂ ಸುಪ್ರೀಂ ಕೋರ್ಟ್ ಟೀಕಿಸಿದೆ.
ಈ ಸಂಬಂಧ ಡಿಎಂಕೆ ನಾಯಕ ಕೆ.ಅನ್ಬುಗನ್ ಮತ್ತು ಕರ್ನಾಟಕ ಸರ್ಕಾರ ಏಪ್ರಿಲ್ 28ರೊಳಗೆ ಹೊಸದಾಗಿ ಕರ್ನಾಟಕ ಹೈಕೋರ್ಟ್ನಲ್ಲಿ ಲಿಖಿತ ವಾದ ಸಲ್ಲಿಸಬಹುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸ ವಿಚಾರಣೆ ನಡೆಸುವ ಅಗತ್ಯ ಇಲ್ಲ ಎಂದಿರುವ ಕೋರ್ಟ್, ಕರ್ನಾಟಕ ಹೈಕೋರ್ಟ್ ಜಯಲಲಿತಾ ಅಕ್ರಮ ಆಸ್ತಿ ಪ್ರಕರಣದ ತೀರ್ಪು ಪ್ರಕಟಿಸಬಹುದು ಎಂದು ನಿರ್ದೇಶನ ನೀಡಿದೆ.