ನವದೆಹಲಿ : ಅಂತರ್ಜಾಲ ತಾರತಮ್ಯ ನೀತಿಯನ್ನು ಹೋಗಲಾಡಿಸಿ ಇಂಟರ್ನೆಟ್ ಸ್ಥಾಗಿತ್ಯ ನೀತಿಯನ್ನು ಜಾರಿಗೊಳಿಸಬೇಕೆಂದು ನಡೆದಿರುವ ಹೋರಾಟದ ಮಧ್ಯೆಯೇ, ಈ ನೀತಿ ಜಾರಿಗೆ ಬಂದರೆ ಕರೆ ದರಗಳನ್ನು ಆರು ಪಟ್ಟು ಹೆಚ್ಚಿಸುವ ಅನಿವಾರ್ಯತೆಗೆ ಸಿಲುಕಲಿದ್ದೇವೆ ಎಂದು ಮೊಬೈಲ್ ಸೇವಾದಾರ ಕಂಪನಿಗಳು ಎಚ್ಚರಿಸಿವೆ.
ಟೆಲಿಕಾಂ ಕಂಪನಿಗಳು ಸರ್ಕಾರ ಹಾಕಿರುವ ಎಲ್ಲ ನಿಯಮಗಳನ್ನು ಪಾಲಿಸುತ್ತವೆ. ಆದರೆ ಇವೇ ನಿಯಮಗಳು ಸ್ಕೈಪಿ ಮತ್ತು ವಾಟ್ಸಪ್ ನಂಥ ಹೊಸ ಮಾದರಿಯ ಸೇವೆಗಳಿಗೆ ಅನ್ವಯವಾಗುವುದಿಲ್ಲ. ಹೀಗಾಗಿ ಈ ರೀತಿಯ ಹೊಸ ಸೇವೆಗಳಿಗೆ ಮತ್ತು ಮೊಬೈಲ್/ಇಂಟರ್ನೆಟ್ ಸೇವಾದಾರ ಕಂಪನಿಗಳಿಗೆ ಒಂದೇ ರೀತಿಯ ನಿಯಮ ಅನ್ವಯವಾಗಬೇಕು. ಸ್ಪರ್ಧೆಗೆ ಸಮಾನ ವೇದಿಕೆ ಸೃಷ್ಟಿಯಾಗಬೇಕು. ಹೀಗಿದ್ದರೆ ಮಾತ್ರ ಕರೆದರಗಳು ನಿಯಂತ್ರಣದಲ್ಲಿ ಉಳಿಯಬಹುದು ಎಂದು ಕಂಪನಿಗಳು ಅಭಿಪ್ರಾಯಪಟ್ಟಿವೆ.
ಮೊಬೈಲ್/ಇಂಟರ್ನೆಟ್ ಸೇವಾದಾರ ಕಂಪನಿಗಳು ಸರ್ಕಾರದೊಂದಿಗೆ ತಮ್ಮ ಆದಾಯ ಹಂಚಿಕೊಳ್ಳುತ್ತವೆ. ಉಗ್ರ ಮತ್ತು ಸಮಾಜಘಾತಕ ಚಟುವಟಿಕೆ ತಡೆಯಲು ಫೋನ್ ಕದ್ದಾಲಿಕೆಗೂ ನೆರವು ನೀಡುತ್ತವೆ. ಆದರೆ ವಾಟ್ಸಪ್, ಸ್ಕೈಪಿಯಂಥ ಹೊಸ ಮಾದರಿಯ ಸೇವೆಗಳು ಈ ಎಲ್ಲ ಜವಾಬ್ದಾರಿಯಿಂದ ಮುಕ್ತವಾಗಿವೆ. ಇದು ಮೊಬೈಲ್/ಇಂಟರ್ನೆಟ್ ಕಂಪನಿಗಳಿಗೆ ಭಾರಿ ಹೊರೆ ಸೃಷ್ಟಿಸುತ್ತದೆ. ಹೆಚ್ಚಿನ ದತ್ತಾಂಶ ವೆಚ್ಚದಿಂದ ಕರೆದರಗಳನ್ನು 6 ಪಟ್ಟು ಹೆಚ್ಚಿಸಬೇಕಾಗುತ್ತದೆ ಎಂದು ಕಂಪನಿಗಳು ಹೇಳಿವೆ.