ಬೆಂಗಳೂರು : ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ ಭಾಗ್ಯ ಕಲ್ಪಿಸಿರುವ ರಾಜ್ಯ ಸರ್ಕಾರ ಮೂಲ ವೇತನದ ಶೇ. 25.25ರಷ್ಟಿದ್ದ ತುಟ್ಟಿಭತ್ಯೆಯನ್ನು ಶೇ.28.75ಕ್ಕೆ ಪರಿಷ್ಕರಿಸಿದೆ. ಈ ಮೂಲಕ ಚಾಲ್ತಿ ಇರುವ ತುಟ್ಟಿಭತ್ಯೆಯಲ್ಲಿ ಶೇ.3.5ರಷ್ಟು ಏರಿಕೆ ಮಾಡಿದಂತಾಗಿದೆ.
ಪರಿಷ್ಕೃತ ತುಟ್ಟಿಭತ್ಯೆ 2015ರ ಜ.1ರಿಂದಲೇ ಪೂರ್ವಾನ್ವಯವಾಗುವಂತೆ ಏ.24ರಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಸರ್ಕಾರದ ವಿವಿಧ ಇಲಾಖೆಗಳು ಮತ್ತು ಜಿಲ್ಲಾ ಪಂಚಾಯತ್ ಗಳ ಪೂರ್ಣಾವಧಿ ನೌಕರರು, ಕಾಲಿಕ ವೇತನ ಶ್ರೇಣಿ ಹೊಂದಿದವರು, ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಮತ್ತು ವಿಶ್ವವಿದ್ಯಾಲಯಗಳಲ್ಲಿ ಸೇವೆ ಸಲ್ಲಿಸುತ್ತಿರುವವರು, ಯುಜಿಸಿ, ಎಐಸಿಟಿಇ, ಐಸಿಎಆರ್ ವೇತನ ಶ್ರೇಣಿ ಹೊಂದಿದವರು ಹಾಗೂ ಈ ಎಲ್ಲ ಹಂತದ ನಿವೃತ್ತ ನೌಕರರಿಗೆ ಪರಿಷ್ಕೃತ ಆದೇಶ ಆನ್ವಯವಾಗಲಿದೆ.