ನವದೆಹಲಿ : ಅಕ್ಷಯ ತೃತೀಯ ಬಂತೆಂದರೆ ಸಾಕು ಜನ ಚಿನ್ನದ ಅಂಗಡಿಗಳತ್ತ ಮುಖ ಮಾಡುತ್ತಾರೆ. ಅದರಲ್ಲೂ ಈ ವರ್ಷ ಚಿನ್ನ ಖರೀದಿಗೆ ಮತ್ತೂಂದು ಕಾರಣವಿದೆ. ಕಳೆದ ವರ್ಷದ ಅಕ್ಷಯ ತೃತೀಯ ದಿನಕ್ಕೆ ಹೋಲಿಸಿದರೆ ಈ ವರ್ಷ ಚಿನ್ನದ ಬೆಲೆಯಲ್ಲಿ ಶೇ.10ರಷ್ಟು ಇಳಿಕೆಯಾಗಿದೆ.
ಕಳೆದ ವರ್ಷ ಮೇ 24ರಂದು ಅಕ್ಷಯ ತೃತೀಯ ಹಬ್ಬ ಬಂದಿತ್ತು. ಆಗ ಚಿನ್ನದ ಬೆಲೆ ಪ್ರತಿ 10 ಗ್ರಾಂ.ಗೆ 30000 ರೂ. ಆಸುಪಾಸಿನಲ್ಲಿತ್ತು. ಆದರೆ ಈ ವರ್ಷ ಒಂದು ತಿಂಗಳ ಮೊದಲೇ ಹಬ್ಬ ಬಂದಿದ್ದು, ಬೆಲೆ 27000 ರೂ. ಆಸುಪಾಸಿನಲ್ಲಿದೆ.
ಕಳೆದ ವರ್ಷ ಆರ್ಥಿಕ ಹಿಂಜರಿಕೆ ಮತ್ತು ಬೆಲೆ ದುಬಾರಿ ಎನ್ನುವ ಕಾರಣಕ್ಕೆ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಚಿನ್ನದ ಅಂಗಡಿಗಳತ್ತ ಮುಖ ಮಾಡಿರಲಿಲ್ಲ. ಆದರೆ ಈ ವರ್ಷ ಬೆಲೆ ಇಳಿಕೆಯಾಗಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಪ್ರಮಾಣದ ಚಿನ್ನ ಮಾರಾಟದ ನಿರೀಕ್ಷೆ ಹೊಂದಲಾಗಿದೆ.