ನವದೆಹಲಿ : ಗುಪ್ತಚರ ಇಲಾಖೆ ಮಾಹಿತಿ ಹಿನ್ನಲೆಯಲ್ಲಿ ಕಾರ್ಯಾಚರಣೆಯೊಂದರಲ್ಲಿ ನೌಕಾಪಡೆ ಮತ್ತು ಕರಾವಳಿ ತಟರಕ್ಷಣಾ ಪಡೆ ಪಾಕಿಸ್ತಾನಕ್ಕೆ ಸೇರಿದ ದೋಣಿಯೊಂದನ್ನು ವಶಕ್ಕೆ ಪಡೆದುಕೊಂಡಿದೆ.
ಇದರಲ್ಲಿ 140 ಕೆ.ಜಿ. ಹೆರಾಯಿನ್ ಸಾಗಿಸಲಾಗುತ್ತಿತ್ತು ಎನ್ನಲಾಗಿದೆ. ಪ್ರಕರಣ ಸಂಬಂಧ ದೋಣಿಯಲ್ಲಿದ್ದ 8 ಮಂದಿಯನ್ನು ಬಂಧಿಸಿದ್ದಾರೆ. ಶೋಧ ವೇಳೆ ಅವರ ಬಳಿ ಸ್ಯಾಟಲೈಟ್ ಫೋನ್ ಪತ್ತೆಯಾಗಿದೆ.
ಗುಪ್ತಚರ ಮೂಲಗಳ ಖಚಿತ ಮಾಹಿತಿ ಮೇರೆಗೆ ಪೋರಬಂದರ್ ನತ್ತ ಪಾಕಿಸ್ತಾನದ ದೋಣಿಯೊಂದು ಬರುತ್ತಿದ್ದು, ಅದರಲ್ಲಿ ಶಂಕಾಸ್ಪದ ವಸ್ತುಗಳಿವೆ ಎಂಬ ಮಾಹಿತಿ ದೊರೆತಿತ್ತು. ಅದರಂತೆ, ನೌಕಾಪಡೆಯ ಎರಡು ಮತ್ತು ತಟರಕ್ಷಣಾ ಪಡೆಯ ಒಂದು ಹಡಗು ಮತ್ತು ಕಣ್ಗಾವಲು ವಿಮಾನ ದೋಣಿಯನ್ನು ಸುತ್ತುವರಿದಿದ್ದು, ವಶಕ್ಕೆ ತೆಗೆದುಕೊಂಡಿವೆ. ವಶಪಡಿಸಿಕೊಂಡ ದೋಣಿಯನ್ನು ಪೋರಬಂದರ್ ಗೆ ತರಲಾಗಿದೆ.
2014ರ ಡಿ.31ರಂದೂ ಸ್ಫೋಟಕಗಳನ್ನು ಹೊಂದಿತ್ತು ಎನ್ನಲಾದ ದೋಣಿಯೊಂದನ್ನು ತಟರಕ್ಷಣಾ ಪಡೆ ದೋಣಿ ಬೆನ್ನತ್ತಿದ್ದು, ಈ ವೇಳೆ ಸ್ಫೋಟಗೊಂಡಿತ್ತು. ಈ ವಿಚಾರದಲ್ಲಿ ಸಾಕಷ್ಟು ವಿವಾದಗಳು ಉಂಟಾಗಿದ್ದವು. ದೋಣಿಯನ್ನು ತಟರಕ್ಷಣಾ ಪಡೆಯೇ ಸ್ಫೋಟಿಸಿದೆ ಎಂಬ ವಾದಗಳೂ ಇದ್ದವು. ಅದಾಗಿ ಕೆಲವೇ ತಿಂಗಳಲ್ಲಿ ಮತ್ತೂಂದು ದೋಣಿ ಪತ್ತೆಯಾಗಿದೆ.