ನವದೆಹಲಿ : ಭಾರತದ ರಾಷ್ಟ್ರೀಯ ಪ್ರಾಣಿ ಪಟ್ಟದಿಂದ ಹುಲಿಯನ್ನು ಕೆಳಗಿಳಿಸಿ, ಗುಜರಾತ್ ನಲ್ಲಿ ಮಾತ್ರವೇ ಕಂಡುಬರುವ ಸಿಂಹವನ್ನು ಪ್ರತಿಷ್ಠಾಪಿಸಲು ಕೇಂದ್ರ ಸರ್ಕಾರ ಪರಿಶೀಲಿಸುತ್ತಿದೆ ಎಂದು ತಿಳಿದುಬಂದಿದೆ.
ದೇಶದ 17 ರಾಜ್ಯಗಳಲ್ಲಿ ವ್ಯಾಘ್ರ ಸಂತತಿ ಇದ್ದು, ಹುಲಿಯನ್ನು 1972ರಲ್ಲಿ ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಲಾಗಿದೆ. ಇದೀಗ ಹುಲಿ ಬದಲಿಗೆ ಸಿಂಹವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಬೇಕು ಎಂದು ಜಾರ್ಖಂಡ್ ನ ರಾಜ್ಯಸಭಾ ಸದಸ್ಯ, ಉದ್ಯಮಿ ಪರಿಮಳ ನಾಥಾನಿ ಪರಿಸರ ಸಚಿವಾಲಯಕ್ಕೆ ಪ್ರಸ್ತಾವ ಕಳುಹಿಸಿದ್ದಾರೆ. ಇದನ್ನು ರಾಷ್ಟ್ರೀಯ ವನ್ಯಜೀವಿ ಮಂಡಳಿಗೆ ರವಾನಿಸಲಾಗಿದೆ. ಈ ಮಂಡಳಿಯಲ್ಲಿ ಗುಜರಾತ್ ಮೂಲದ ಸದಸ್ಯರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.
ಕಳೆದ ಮಾರ್ಚ್ ನಲ್ಲಿ ಪರಿಸರ ಸಚಿವ ಪ್ರಕಾಶ್ ಜಾವಡೇಕರ್ ನೇತೃತ್ವದಲ್ಲಿ ನಡೆದ ವನ್ಯಜೀವಿ ಮಂಡಳಿಯ ಸ್ಥಾಯಿ ಸಮಿತಿಯಲ್ಲಿ ವಿಚಾರ ಚರ್ಚೆಗೆ ಬಂದಿದೆ. ಈ ಬಗ್ಗೆ ವಿಸ್ತೃತ ಚರ್ಚೆಗೆ ಸ್ಥಾಯಿ ಸಮಿತಿ ಸಲಹೆ ನೀಡಿದೆ.