ನವದೆಹಲಿ : ದೀರ್ಘಾವಧಿ ರಜೆ ಮುಕ್ತಾಯಗೊಳಿಸಿ ಭಾರತಕ್ಕೆ ವಾಪಸ್ಸಾಗಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ಭೂಸ್ವಾಧೀನ ಕಾಯ್ದೆ ಕುರಿತು ಏ.18ರಂದು ರೈತರೊಂದಿಗೆ ಚರ್ಚೆ ನಡೆಸಲಿದ್ದಾರೆ.
ಏ.19ರಂದು ಕಾಂಗ್ರೆಸ್ ಪಕ್ಷ ಭೂಸ್ವಾಧೀನ ಕಾಯ್ದೆ ವಿರುದ್ಧ ಕಿಸಾನ್ ರ್ಯಾಲಿ ಹಮ್ಮಿಕೊಂಡಿದ್ದು, ಈ ರ್ಯಾಲಿಯಲ್ಲಿ ರಾಹುಲ್ ಗಾಂಧಿ ಭಾಗವಹಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ರೈತರೊಂದಿಗೆ ಕಾಯ್ದೆ ಬಗ್ಗೆ ಚರ್ಚೆ ನಡೆಸಲು ಮುಂದಾಗಿದ್ದಾರೆ.
ಕಾಂಗ್ರೆಸ್ನ ಕಿಸಾನ್ ರ್ಯಾಲಿ ನಡೆಯಲಿರುವ ಒಂದು ದಿನ ಮುಂಚೆ ರೈತರ ಜತೆ ರಾಹುಲ್ ಚರ್ಚೆ ನಡೆಸಲಿರುವುದು ಕುತೂಹಲ ಕೆರಳಿಸಿದೆ. ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಭೂಸ್ವಾಧೀನ ಕಾಯ್ದೆ ವಿರುದ್ಧ ಕಾಂಗ್ರೆಸ್ ನಡೆಸುತ್ತಿರುವ ಪ್ರತಿಭಟನೆಯಲ್ಲಿ ಉತ್ತರ ಪ್ರದೇಶ, ಹರಿಯಾಣ, ರಾಜಸ್ಥಾನ, ಪಂಜಾಬ್, ಮಧ್ಯ ಪ್ರದೇಶ, ಕರ್ನಾಟಕ ಸೇರಿದಂತೆ ದೇಶದ ಹಲವು ರಾಜ್ಯಗಳ ರೈತ ಸಂಘಟನೆಗಳ ಮುಖಂಡರು ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ.
ಪಾರದರ್ಶಕವಾಗಿ ಭೂ ಸ್ವಾಧೀನ ಕಾಯ್ದೆಯನ್ನು ಜಾರಿಗೆ ತರಬೇಕೆ ಹೊರತು ರೈತರಿಗೆ ಅನ್ಯಾಯವಾಗಬಾರದು ಎಂಬುದನ್ನು ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿಕೊಡುವುದು ಈ ರ್ಯಾಲಿಯ ಉದ್ದೇಶವಾಗಿದೆ. ದೀರ್ಘಕಾಲದ ರಜೆಯ ಬಳಿಕ ವಾಪಸ್ಸಾಗಿರುವ ರಾಹುಲ್ ಗಾಂಧಿ ಈ ರ್ಯಾಲಿಯಲ್ಲಿ ಭಾಷಣ ಮಾಡಲಿದ್ದು ಈ ಬಗ್ಗೆ ಎಲ್ಲರಲ್ಲೂ ಕುತೂಹಲ ಮೂಡಿದೆ. ಪೂರ್ವನಿಗದಿಯಂತೆ ರಾಹುಲ್ ಗಾಂಧಿ ಏ.17ರಂದು ರೈತರೊಂದಿಗೆ ಮಾತುಕತೆ ನಡೆಸಬೇಕಿತ್ತು.