Jayanagar : ಜೆ.ಪಿ.ನಗರದ ಸಾರಕ್ಕಿ ಕೆರೆ ಪ್ರದೇಶದ ಒತ್ತುವರಿ ತೆರವು ಕಾರ್ಯಾಚರಣೆಗೆ ಜಿಲ್ಲಾಡಳಿತ ಮುಂದಾಗಿದ್ದು, ಜಿಲ್ಲಾಧಿಕಾರಿ ನಿರ್ದೇಶನದಂತೆ ಪೊಲೀಸ್ ಬಿಗಿ ಭದ್ರತೆಯಲ್ಲಿ ತೆರವು ಕಾರ್ಯಾಚರಣೆ ನಡೆಯುತ್ತಿದೆ.
ಸಾರಕ್ಕಿ ಕೆರೆ ವ್ಯಾಪ್ತಿಯಲ್ಲಿ ಒತ್ತುವರಿಯಾಗಿದ್ದ 32 ಎಕರೆ ಜಾಗವನ್ನು ತೆರವು ಮಾಡಲಾಗುತ್ತಿದೆ. ಒಟ್ಟು 82 ಎಕರೆ ವ್ಯಾಪ್ತಿಯಲ್ಲಿ ಇದ್ದ ಕೆರೆಯ ಕಾಲು ಭಾಗಕ್ಕಿಂತ ಹೆಚ್ಚಿನ ಪ್ರದೇಶ ಒತ್ತುವರಿ ಮಾಡಿ ಬಡಾವಣೆ ನಿರ್ಮಿಸಿದ್ದರು. ಈ ತೆರವು ಕಾರ್ಯಾಚರಣೆ ಇನ್ನೂ ನಾಲ್ಕೈದು ದಿನಗಳ ಕಾಲ ಮುಂದುವರಿಯಲಿದೆ.
ಸಾರಕ್ಕಿ ಕೆರೆ ಜಾಗ ಒತ್ತುವರಿ ತೆರವು ವಿಚಾರದ ಕುರಿತಂತೆ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಬೆಂಗಳೂರು ನಗರ ಡಿಸಿ ಡಿ.ರವಿಶಂಕರ್, ತೆರವು ಕಾರ್ಯಾಚರಣೆಗೂ ಮುನ್ನ ಎಲ್ಲರಿಗೂ ನೋಟಿಸ್ ನೀಡಲಾಗಿತ್ತು. ಒತ್ತುವರಿ ಜಾಗದಲ್ಲಿ ಮನೆ ನಿರ್ಮಿಸಿಕೊಂಡವರು ಅವರಾಗಿಯೇ ತೆರವುಗೊಳಿಸಿದ್ರೆ ಕಟ್ಟಡ ಒಡೆಯಲ್ಲ. ಇಲ್ಲದಿದ್ದರೆ ಕಟ್ಟಡ ತೆರವು ಕಾರ್ಯಾಚರಣೆ ಮುಂದುವರಿಯುತ್ತದೆ ಎಂದು ತಿಳಿಸಿದ್ದಾರೆ.