ಹರಿದ್ವಾರ : ಭಾರತೀಯ ಜನತಾ ಪಕ್ಷದ(ಬಿಜೆಪಿ) ಸಂಸದ ಯೋಗಿ ಆದಿತ್ಯನಾಥ್ ಎಲ್ಲರ ಹುಬ್ಬೇರಿಸುವಂತಹ ಮತ್ತೊಂದು ಹೇಳಿಕೆ ನೀಡಿದ್ದಾರೆ.
ಹಿಂದೂಗಳ ಪ್ರಸಿದ್ಧ ಪುಣ್ಯಕ್ಷೇತ್ರ ಹರಿದ್ವಾರದಲ್ಲಿ ಹಿಂದೂಗಳಿಗೆ ಮಾತ್ರ ಪ್ರವೇಶ ನೀಡಬೇಕು, ಅನ್ಯಧರ್ಮದವರಿಗೆ ಪ್ರವೇಶ ನಿಷೇಧಿಸಬೇಕು ಎಂದು ಯೋಗಿ ಆದಿತ್ಯನಾಥ್ ಒತ್ತಾಯಿಸಿದ್ದಾರೆ. ಹರಿದ್ವಾರದ ಪಾವಿತ್ರ್ಯತೆ ಕಾಪಾಡುವ ಉದ್ದೇಶದಿಂದ ಹಿಂದೂಗಳಿಗೆ ಮಾತ್ರ ಪ್ರವೇಶ ನೀಡಬೇಕೆಂದು ಯೋಗಿ ಆದಿತ್ಯನಾಥ್ ಅಭಿಪ್ರಾಯಪಟ್ಟಿದ್ದಾರೆ.
ಮುಸ್ಲಿಮರಿಗೆ ಮತದಾನ ಮಾಡುವ ಹಕ್ಕನ್ನು ನೀಡಬಾರದು ಎಂಬ ಹೇಳಿಕೆಗಳು ಬಂದ ಬೆನ್ನಲ್ಲೇ ಅನ್ಯಧರ್ಮೀಯರಿಗೆ ಹರಿದ್ವಾರವನ್ನು ಪ್ರವೇಶಿಸದಂತೆ ನಿರ್ಬಂಧ ಹೇರಬೇಕೆಂದು ಯೋಗಿ ಆದಿತ್ಯನಾಥ್ ಹೇಳಿಕೆ ನೀಡಿದ್ದಾರೆ. ಹರ್ ಕಿ ಪೌರಿಯೂ ಸೇರಿದಂತೆ ಹರಿದ್ವಾರದ ಇನ್ನಿತರ ಪವಿತ್ರ ಕ್ಷೇತ್ರಗಳಿಗೆ ಹಿಂದೂಗಳಿಗೆ ಮಾತ್ರ ಪ್ರವೇಶ ನೀಡುವ ವಿಚಾರವನ್ನು ಸಾಕಾರಗೊಳಿಸಬೇಕೆಂದು ಹಿಂದೂ ಸಂತರು ಹಾಗೂ ಹಿಂದೂ ಸಂಘಟನೆಗಳಿಗೆ ಯೋಗಿ ಆದಿತ್ಯನಾಥ್ ಕರೆ ನೀಡಿದ್ದಾರೆ.
ಇದಕ್ಕೂ ಮೊದಲು ಅನೇಕ ವಿವಾದಾತ್ಮಕ ಹೇಳಿಕೆ ನೀಡಿದ್ದ ಯೋಗಿ ಆದಿತ್ಯನಾಥ್, ಇಡೀ ಪ್ರಪಂಚದಲ್ಲಿ ಭಾರತದಲ್ಲಿ ಮಾತ್ರ ಮುಸ್ಲಿಮರು ಸುರಕ್ಷಿತವಾಗಿದ್ದಾರೆ, ಹಿಂದುತ್ವದ ಉದಾರತೆಯೇ ಅದಕ್ಕೆ ಕಾರಣ ಎಂದು ಹೇಳಿದ್ದರು.