ಶ್ರೀನಗರ : ಭಾರತ ವಿರೋಧಿ ಪ್ರತಿಭಟನೆ ರೂವಾರಿ, ಪ್ರತ್ಯೇಕತಾವಾದಿ ಮುಖಂಡರಾದ ಮಸರತ್ ಆಲಂ ಹಾಗೂ ಯಾಸಿನ್ ಮಲಿಕ್ ರನ್ನು ಜಮ್ಮು-ಕಾಶ್ಮೀರ ಪೊಲೀಸರು ಬಂಧಿಸಿದ್ದಾರೆ.
ಇಬ್ಬರು ನಾಯಕರು ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಟ್ರಾಲ್ ಪ್ರದೇಶಕ್ಕೆ ತೆರಳುತ್ತಿದ್ದ ವೇಳೆ ಮುಂಜಾಗ್ರತಾ ಕ್ರಮವಾಗಿ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಪುಲ್ವಾಮಾ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಮಿಲಿಟರಿ ಪಡೆ ಶಂಕಿತ ಉಗ್ರನೊಬ್ಬನನ್ನು ಗುಂಡಿಟ್ಟು ಹತ್ಯೆಗೈದಿದ್ದರು. ಈ ಘಟನೆಯನ್ನು ಖಂಡಿಸಿ ಪ್ರತಿಭಟಿಸಲು ತೆರಳುತ್ತಿದ್ದ ಇಬ್ಬರು ಪ್ರತ್ಯೇಕತಾವಾದಿ ಮುಖಂಡರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ವಿವರಿಸಿದ್ದಾರೆ.
ಕಣಿವೆ ರಾಜ್ಯದಲ್ಲಿ 2010ರಲ್ಲಿ ನಡೆದ ಭಾರತ ವಿರೋಧಿ ಪ್ರತಿಭಟನೆಯ ಘಟನೆಯಲ್ಲಿ ನಡೆದ ಹಿಂಸಾಚಾರದಲ್ಲಿ 112 ಮಂದಿ ಸಾವನ್ನಪ್ಪಿದ್ದರು. 112 ಯುವಕರ ಸಾವಿಗೆ ಕಾರಣನಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಪಾಕಿಸ್ತಾನ ಪರ ಪ್ರತ್ಯೇಕತಾವಾದಿ ನಾಯಕ ಮಸರತ್ ಆಲಂನನ್ನು ಬಂಧಿಸಿದ್ದು, ಕಳೆದ ನಾಲ್ಕು ವರ್ಷಗಳ ಕಾಲ ಬಾರಮುಲ್ಲಾ ಜೈಲಿನಲ್ಲಿದ್ದ. ಆದರೆ ಇತ್ತೀಚೆಗೆ ಜಮ್ಮು-ಕಾಶ್ಮೀರದ ಮುಖ್ಯಮಂತ್ರಿ ಮುಫ್ತಿ ಮೊಹಮ್ಮದ್ ಸಯೀದ್ ಅವರ ರಾಜಕೀಯ ಕೈದಿಗಳ ಬಿಡುಗಡೆ ಆದೇಶದ ಹಿನ್ನೆಲೆಯಲ್ಲಿ ಪ್ರತ್ಯೇಕತಾವಾದಿ ನಾಯಕ ಆಲಂ ಜೈಲಿನಿಂದ ಬಿಡುಗಡೆ ಆಗಿದ್ದ. ಇದಕ್ಕೆ ಪ್ರಬಲ ವಿರೋಧ ವ್ಯಕ್ತವಾಗಿತ್ತು.