ನವದೆಹಲಿ : 'ಲಿವ್ ಇನ್ ಟುಗೆದರ್' ರಿಲೇಶನ್ ಶಿಪ್ ಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದ್ದು, ಅವಿವಾಹಿತ ಜೋಡಿ ಪತಿ-ಪತ್ನಿಯರಂತೆ ವಾಸವಾಗಿದ್ದರೆ ಅವರನ್ನು ವಿವಾಹಿತರೆಂದೇ ಪರಿಗಣಿಸಬೇಕೆಂದು ಹೇಳಿದೆ.
ಲಿವ್ ಇನ್ ಟುಗೆದರ್ ನಲ್ಲಿದ್ದ ತನ್ನ ಜತೆಗಾರ ಮರಣಿಸಿದರೆ ಆತನ ಆಸ್ತಿಯಲ್ಲಿ ಮಹಿಳೆಗೆ ಹಕ್ಕಿದೆ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ. ವಿವಾಹವಾಗದೇ ಲಿವ್ ಇನ್ ಟುಗೆದರ್ ನಲ್ಲಿರುವ ಜೋಡಿಗಳನ್ನು ಇನ್ನು ಮುಂದೆ ವಿವಾಹಿತರೆಂದೇ ಪರಿಗಣಿಸಬೇಕಾಗುತ್ತದೆ. ಅವರು ಕಾನೂನು ಪ್ರಕಾರ ವಿವಾಹವಾಗಿಲ್ಲವೆಂದು ಸಾಬೀತು ಪಡಿಸುವ ಹೊಣೆಗಾರಿಕೆಯು ಅವರ ಪ್ರತಿವಾದಿಗಳದ್ದಾಗಿರುತ್ತದೆ ಎಂದು ಜಸ್ಟಿಸ್ ಎಂ ವೈ ಇಕ್ಬಾಲ್ ಮತ್ತು ಜಸ್ಟಿಸ್ ಅಮಿತಾಬ್ ರಾಯ್ ಅವರನ್ನು ಒಳಗೊಂಡ ಪೀಠ ತೀರ್ಪು ನೀಡಿದೆ.
ಲಿವ್ ಇನ್ ಟುಗೆದರ್ ನ್ನು ಪತಿ-ಪತ್ನಿಯರ ಸಂಬಂಧ ಎಂದು ಪರಿಗಣಿಸಬಹುದೇ ಹೊರತು, ಅನೈತಿಕ ಸಂಬಂಧ ಎಂದು ಹೇಳಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ಹೇಳಿದೆ.
ಕೆಲವು ವರ್ಷಗಳಿಂದ ಲಿವ್ ಇನ್ ಟುಗೆದರ್ ಪ್ರವೃತ್ತಿ ತೀವ್ರಗೊಳ್ಳುತ್ತಿದ್ದು, ವಿವಾಹವಾಗದೇ ಜತೆಯಲ್ಲಿ ವಾಸಿಸುವುದರ ಬಗ್ಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು.