ನವದೆಹಲಿ : ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿ, ಹವಾಮಾನ ಬದಲಾವಣೆ, ಪರಿಸರ ಸಂರಕ್ಷಣೆ ಬಗ್ಗೆ ಭಾರತ ಇತರ ದೇಶಗಳನ್ನು ಮುನ್ನಡೆಸುವಂತಾಗಬೇಕೆಂದು ಕರೆ ನೀಡಿದ್ದರು. ಆದರೆ ಭಾರತದ ಪ್ರಮುಖ ನಗರಗಳಲ್ಲಿ ಒಂದಾದ ಬೆಂಗಳೂರಿನಲ್ಲೇ ಅತ್ಯಧಿಕ ವಾಯುಮಾಲಿನ್ಯ ದಾಖಲಾಗಿದೆ.
ಇತರ ರಾಜಧಾನಿಗಳನ್ನು ಹಿಂದಿಕ್ಕಿರುವ ಬೆಂಗಳೂರು ದೇಶದಲ್ಲೇ ನಂ.1 ವಾಯುಮಾಲಿನ್ಯ ಹೊಂದಿರುವ ನಗರ ಎಂಬ ಕುಖ್ಯಾತಿಗೆ ಪಾತ್ರವಾಗಿದೆ.
ದೇಶದಲ್ಲಿ ಹೆಚ್ಚಾಗುತ್ತಿರುವ ವಾಯುಮಾಲಿನ್ಯದ ಮೇಲೆ ನಿಗಾ ಇಡಲು ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಚಾಲನೆ ನೀಡಿದ್ದ ರಾಷ್ಟ್ರೀಯ ವಾಯುಗುಣಮಟ್ಟ ಸೂಚ್ಯಂಕದಲ್ಲಿ ತಿಳಿಸಿದ್ದರು. ಕೇಂದ್ರ ಹಾಗೂ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗಳಿಂದ ಪಡೆದ ವಿವರವನ್ನು ಆಧರಿಸಿ ದೈನಿಕವೊಂದು ಪ್ರಕಟಿಸಿರುವ ವರದಿಯಲ್ಲಿ ಬೆಂಗಳೂರು ನಂ.1 ವಾಯುಮಾಲಿನ್ಯ ನಗರ ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.
ಕಳೆದ ಹತ್ತು ದಿನಗಳ ಅವಧಿಯಲ್ಲಿ ಬಿಟಿಎಂ ಲೇಔಟ್ ಪ್ರದೇಶದಲ್ಲಿ ಒಂದು ದಿನ ಮಾತ್ರ ವಾಯುಮಾಲಿನ್ಯದ ಪ್ರಮಾಣ ಮಿತವಾಗಿತ್ತು. ಉಳಿದ ಎಲ್ಲ ದಿನಗಳಲ್ಲಿ ವಾಯುಮಾಲಿನ್ಯದ ಪ್ರಮಾಣ ಅತಿ ಹೆಚ್ಚಾಗಿತ್ತು.
ನೈಟ್ರೋಜನ್ ಆಕ್ಸೈಡ್, ಓಜೋನ್ ಹಾಗೂ ಕಾರ್ಬನ್ ಮಾನಾಕ್ಸೈಡ್ ಮಾಲಿನ್ಯ ಅಂಶಗಳನ್ನು ಆಧರಿಸಿ ವಾಯುಮಾಲಿನ್ಯ ಅಳೆಯಲಾಗುತ್ತದೆ.
ಈ ಪೈಕಿ ನಡೆಸಿದ ಸಮೀಕ್ಷೆಯಲ್ಲಿ ಬೆಂಗಳೂರಿನಲ್ಲೇ ವಿಪರೀತ ವಾಯಮಾಲಿನ್ಯವಾಗುತ್ತಿರುವ ಬಗ್ಗೆ ಅಂಕಿಅಂಶಗಳು ಹೊರಬಂದಿವೆ. ಇದರಲ್ಲಿ ಬೆಂಗಳೂರಿನ ನಾಗರಿಕರ ಆರೋಗ್ಯದ ಮೇಲೆ ಹೆಚ್ಚು ಪರಿಣಾಮ ಬೀರುವ ಬಗ್ಗೆಯೂ ತಿಳಿಸಿಸಲಾಗಿದೆ.