ನವದೆಹಲಿ : 'ರಾಹುಲ್ ಗಾಂಧಿ' ತಮ್ಮ ದೀರ್ಘಾವಧಿ ರಜೆಯಿಂದ ವಾಪಸ್ಸಾಗಲಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ಮುಖಂಡ ದಿಗ್ವಿಜಯ್ ಸಿಂಗ್ ಹೇಳಿದ್ದಾರೆ.
ಏ.19ರಂದು ಕೇಂದ್ರ ಸರ್ಕಾರದ ಭೂಸ್ವಾಧೀನ ಮಸೂದೆಯ ವಿರುದ್ಧ ನಡೆಯಲಿರುವ ಕಿಸಾನ್ ರ್ಯಾಲಿಯನ್ನುದ್ದೇಶಿಸಿ ರಾಹುಲ್ ಗಾಂಧಿ ಮಾತನಾಡಲಿದ್ದಾರೆ ಎಂದು ದಿಗ್ವಿಜಯ್ ಸಿಂಗ್ ಹೇಳಿದ್ದಾರೆ.
ಕಳೆದ ಒಂದು ತಿಂಗಳಿನಿಂದಲೂ ರಾಹುಲ್ ಗಾಂಧಿ ರಜೆ ತೆಗೆದುಕೊಂಡಿದ್ದು ವಿದೇಶಕ್ಕೆ ತೆರಳಿದ್ದಾರೆ. ಸಂಸತ್ ಅಧಿವೇಶನಕ್ಕೂ ಹಾಜರಾಗದೇ ಇರುವುದು ಅವರು ಪ್ರತಿನಿಧಿಸುವ ಅಮೇಥಿ ಲೋಕಸಭಾ ಕ್ಷೇತ್ರದ ಜನತೆಯನ್ನು ಕೆರಳಿಸಿತ್ತು.
ರಾಹುಲ್ ಗಾಂಧಿ ರಜೆ ತೆಗೆದುಕೊಂಡಿರುವುದರಿಂದ ಯಾವುದೇ ಅಭಿವೃದ್ಧಿ ಕೆಲಸಗಳೂ ಸಾಧ್ಯವಾಗುತ್ತಿಲ್ಲ. ನಮ್ಮ ಸಂಸದರನ್ನು ಹುಡುಕಿಕೊಡಿ ಎಂದು ಜಾಹಿರಾತು ಪ್ರಕಟಿಸಿದ್ದರು. ಏ.19ರಂದು ಕಾಂಗ್ರೆಸ್ ಪಕ್ಷ ಕಿಸಾನ್ ರ್ಯಾಲಿಯನ್ನು ಹಮ್ಮಿಕೊಂಡಿದ್ದು, ಈ ರ್ಯಾಲಿಯಲ್ಲಾದರೂ ರಾಹುಲ್ ಗಾಂಧಿ ಭಾಗವಹಿಸಲಿದ್ದಾರೆ ಎಂಬ ನಿರೀಕ್ಷೆ ಇತ್ತು. ಅದರಂತೆಯೇ ದಿಗ್ವಿಜಯ್ ಸಿಂಗ್ ಪ್ರತಿಕ್ರಿಯೆ ನೀಡಿದ್ದು ಏ.19ರಂದು ರಾಹುಲ್ ಗಾಂಧಿ ಭಾರತಕ್ಕೆ ಆಗಮಿಸಲಿದ್ದಾರೆ ಎಂದು ದಿಗ್ವಿಜಯ್ ಸಿಂಗ್ ಹೇಳಿದ್ದಾರೆ.