BW News Bureau : 'ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ'ಕ್ಕೆ ತೆರಳುವ ಮಾರ್ಗದಲ್ಲಿ ಟೋಲ್ ದರ ಏರಿಕೆಯಾಗಲಿದ್ದು ಪರಿಷ್ಕೃತ ದರ ಮಧ್ಯರಾತ್ರಿಯಿಂದಲೇ ಜಾರಿಗೆ ಬರಲಿದೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಜೊತೆ ನವಯುಗ ಕಂಪನಿ, ಪ್ರತಿ ವರ್ಷ ಶೇ.10ರಷ್ಟು ಟೋಲ್ ದರ ಏರಿಕೆ ಮಾಡುವುದಾಗಿ ಮಾಡಿಕೊಂಡಿರುವ ಒಪ್ಪಂದದ ಹಿನ್ನೆಲೆಯಲ್ಲಿ ಟೋಲ್ ದರ ಏರಿಕೆಯಾಗಲಿದೆ.
ಪರ್ಯಾಯ ರಸ್ತೆ ನಿರ್ಮಿಸದೆ ಪದೇ ಪದೇ ಟೋಲ್ ದರ ಏರಿಸುತ್ತಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ನವಯುಗ ಕಂಪನಿ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕಳೆದ 2014ರಲ್ಲಿ ಟೋಲ್ ದರವನ್ನು 115ರೂಪಾಯಿಗೆ ಏರಿಕೆ ಮಾಡಲಾಗಿತ್ತು.
ಜನರಿಗೆ ಹೊರೆಯಾಗದಂತೆ ದರ ಏರಿಕೆ ಮಾಡುವುದಾಗಿ ಕಂಪನಿ ಹೇಳಿಕೆ ನೀಡಿತ್ತಾದರೂ ಒಮ್ಮೆ ಹೋಗಿ ವಾಪಸ್ ಬರಲು 115ರೂ ನಿಗಧಿಯಾಗಿದ್ದ ದರ ಈಗ 125 ರೂಗಳಿಗೆ ಏರಿಕೆಯಾಗಲಿದೆ ಎಂದು ತಿಳಿದುಬಂದಿದೆ.
ಕಳೆದ ಬಾರಿ ಟೋಲ್ ದರ ಏರಿಕೆಯಾಗಿದ್ದಕ್ಕೆ ತೀವ್ರ ಪ್ರತಿಭಟನೆ ನಡೆದಿತ್ತು. ಪ್ರತಿಭಟನೆ ನಡೆದ ಸಂದರ್ಭದಲ್ಲಿ ಸಂಭವಿಸಿದ ಅವಘಡಗಳನ್ನು ಗಮನದಲ್ಲಿರಿಸಿಕೊಂಡು ಈ ಬಾರಿ ಕೋರ್ಟ್ ಮೊರೆ ಹೋಗಿರುವ ನವಯುಗ ಕಂಪನಿ ಬಿಗಿ ಪೊಲೀಸ್ ಬಂದೋಬಸ್ತ್ ಸೇರಿದಂತೆ ಸಿಸಿ ಕ್ಯಾಮೆರಾ ಮತ್ತು 100ಕ್ಕೂ ಹೆಚ್ಚು ಟೋಲ್ ಸಿಬ್ಬಂದಿಯನ್ನು ನಿಯೋಜಿಸಿದೆ.