ನವದೆಹಲಿ : 'ಭೂಸ್ವಾಧೀನ ಕಾಯ್ದೆ' ವಿಚಾರವಾಗಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ದೇಶದ ಜನತೆಯ ದಾರಿ ತಪ್ಪಿಸುತ್ತಿದ್ದಾರೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಆರೋಪಿಸಿದ್ದಾರೆ.
ಎನ್.ಡಿ.ಎ ಸರ್ಕಾರದ ಕಾಯ್ದೆಗೆ ವಿರೋಧ ವ್ಯಕ್ತಪಡಿಸಿತ್ತಿರುವ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ರೂಪಿಸಿದ್ದ ನೀತಿಗಳಿಂದ ನಿರುದ್ಯೋಗ, ರೈತರ ಆತ್ಮಹತ್ಯೆಗಳು ಹೆಚ್ಚಾಗುತ್ತಿವೆ. ಆದರೂ ಕಾಂಗ್ರೆಸ್ ಮಾತ್ರ ಎನ್.ಡಿ.ಎ ಸರ್ಕಾರದ ಕಾಯ್ದೆ ಬಗ್ಗೆ ಅಪಪ್ರಚಾರ ನಡೆಸುತ್ತಿದ್ದಾರೆ ಎಂದು ನಿತಿನ್ ಗಡ್ಕರಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಭೂಸ್ವಾಧೀನ ಕಾಯ್ದೆಯನ್ನು ವಿರೋಧಿಸುತ್ತಿರುವ ಹಿನ್ನೆಲೆಯಲ್ಲಿ ಬಹಿರಂಗ ಚರ್ಚೆಗೆ ಆಗಮಿಸುವಂತೆ ಸೋನಿಯಾ ಗಾಂಧಿಗೆ ನಿತಿನ್ ಗಡ್ಕರಿ ಪತ್ರ ಬರೆದಿದ್ದರು. ಪತ್ರಕ್ಕೆ ಪ್ರತಿಕ್ರಿಯೆ ನೀಡಿದ್ದ ಸೋನಿಯಾ ಗಾಂಧಿ, ರೈತ ವಿರೋಧಿ ಮಸೂದೆ ಬಗ್ಗೆ ಬಹಿರಂಗ ಚರ್ಚೆ ನಡೆಸಲು ಸಿದ್ಧವಿಲ್ಲ ಎಂದು ಹೇಳಿದ್ದರು.
ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ನಿತಿನ್ ಗಡ್ಕರಿ ಸೋನಿಯಾ ಗಾಂಧಿ ದೇಶದ ಜನತೆಯ ದಾರಿ ತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಭೂಸ್ವಾಧೀನ ಕಾಯ್ದೆಯನ್ನು ವಿರೋಧಿಸಿ ಏ.20ರಂದು ಕಾಂಗ್ರೆಸ್ ಕಿಸಾನ್ ರ್ಯಾಲಿ ಹಮ್ಮಿಕೊಂಡಿದೆ. ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಕೂಡಾ ಭಾಗವಹಿಸುವ ಸಾಧ್ಯತೆ ಇದೆ.