ರಾಲೇಗಾಂವ್ ಸಿದ್ದಿ : 'ಭೂಸ್ವಾಧೀನ ಕಾಯ್ದೆ'ವಿರುದ್ಧ ಹೋರಾಟ ನಡೆಸುತ್ತಿರುವ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ, ಕಾಯ್ದೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಜೊತೆ ಬಹಿರಂಗ ಚರ್ಚೆ ನಡೆಯಬೇಕು ಎಂದು ಬೇಡಿಕೆ ಇಟ್ಟಿದ್ದಾರೆ.
ಇತ್ತೀಚೆಗಷ್ಟೇ ಬಹಿರಂಗ ಚರ್ಚೆಗೆ ಆಹ್ವಾನಿಸಿದ್ದ ನಿತಿನ್ ಗಡ್ಕರಿ ಅವರಿಗೆ ಪ್ರತಿಕ್ರಿಯೆ ನೀಡಿರುವ ಅಣ್ಣಾ ಹಜಾರೆ, ನಿತಿನ್ ಗಡ್ಕರಿ ಅವರು ಸರಿಯಾದ ತಯಾರಿ ನಡೆಸಿಲ್ಲ, ಭೂಸ್ವಾಧೀನ ಮಸೂದೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಬಹಿರಂಗ ಚರ್ಚೆ ನಡೆಸಲು ನಾವು ಸಿದ್ಧ ಎಂದು ಹೇಳಿದ್ದಾರೆ.
ಚರ್ಚೆಯನ್ನು ನೋಡಿದ ಬಳಿಕ ಭೂಸ್ವಾಧೀನ ಕಾಯ್ದೆ ಕುರಿತ ಸತ್ಯಾಂಶವನ್ನು ದೇಶದ ಜನತೆ ತಿಳಿಯಲಿ ಎಂದು ರಾಲೇಗಾಂವ್ ಸಿದ್ದಿಯಲ್ಲಿ ಅಣ್ಣಾ ಹಜಾರೆ ತಿಳಿಸಿದ್ದಾರೆ. ಎನ್.ಡಿ.ಎ ಸರ್ಕಾರ ಜಾರಿಗೆ ತಂದಿರುವ ಭೂಸ್ವಾಧೀನ ಕಾಯ್ದೆಗೆ ಅಣ್ಣಾ ಹಜಾರೆ ಹಾಗೂ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿದ್ದ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ, ರಾಜಕೀಯ ಕಾರಣಗಳಿಗಾಗಿ ಆರೋಪ ಮಾಡುವುದನ್ನು ಬಿಟ್ಟು ಬಹಿರಂಗ ಚರ್ಚೆಗೆ ಬರುವಂತೆ ಆಹ್ವಾನ ನೀಡಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಹಜಾರೆ, ಪ್ರಧಾನಿ ಮೋದಿ ಅವರೊಂದಿಗೆ ಚರ್ಚೆಗೆ ಸಿದ್ಧವಿರುವುದಾಗಿ ಹೇಳಿಕೆ ನೀಡಿದ್ದಾರೆ.