ಬೆಂಗಳೂರು : ಐ.ಎ.ಎಸ್ ಅಧಿಕಾರಿ ಡಿ.ಕೆ ರವಿ ಅವರ ನಿಗೂಢ ಸಾವಿನ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಸಾವಿಗೂ ಮುನ್ನ ರವಿ ಅವರು ಮಹಿಳಾ ಐ.ಎ.ಎಸ್ ಅಧಿಕಾರಿಗೆ 44 ಬಾರಿ ಕರೆ ಮಾಡಿದ್ದರು ಎಂಬ ವದಂತಿ ಸುಳ್ಳು ಎಂಬುದು ಸಾಬೀತಾಗಿದೆ.
ರವಿ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳಾ ಐ.ಎ.ಎಸ್ ಅಧಿಕಾರಿ ಪತಿ ಹೈಕೋರ್ಟ್ ನಲ್ಲಿ ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆ ಸಂದರ್ಭದಲ್ಲಿ ಈ ಸತ್ಯ ಹೊರಬಿದ್ದಿದ್ದು, ಡಿ.ಕೆ.ರವಿ ಸಾಯುವ ಮೊದಲು ತಮ್ಮ ಪತ್ನಿಗೆ 44 ಬಾರಿ ಕರೆ ಮಾಡಿಲ್ಲ, ಕೇವಲ ನಾಲ್ಕು ಕರೆಗಳನ್ನಷ್ಟೇ ಮಾಡಿದ್ದರು ಎಂದು ಸ್ಪಷ್ಟನೆ ನೀಡಿದ್ದಾರೆ.
ಡಿ.ಕೆ ರವಿ ಅವರ ನಿಗೂಢ ಸಾವನ್ನು ಆತ್ಮಹೆತ್ಯೆ ಎಂದು ಬಿಂಬಿಸಲು ಹೊರಟಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ, ರವಿ ಅವರು ಸಾಯುವುದಕ್ಕೂ ಮುನ್ನ ಮಹಿಳಾ ಐ.ಎ.ಎಸ್ ಅಧಿಕಾರಿಯೊಬ್ಬರಿಗೆ 44 ಬಾರಿ ಕರೆ ಮಾಡಿದ್ದೇಕೆ ಎಂದು ಪ್ರಶ್ನಿಸಿದ್ದರು. ಆದರೆ ಸ್ವತಃ ಐ.ಎ.ಎಸ್ ಅಧಿಕಾರಿ ಪತಿ ಸ್ಪಷ್ಟನೆ ನೀಡಿದ್ದು, 44 ಬಾರಿ ಅಲ್ಲ 4 ಬಾರಿ ಕರೆ ಮಾಡಿರುವುದಾಗಿ ತಿಳಿಸಿದ್ದಾರೆ.
ಮಹಿಳಾ ಐ.ಎ.ಎಸ್ ಅಧಿಕಾರಿ ಪತಿ ಸಲ್ಲಿಸಿದ್ದ ರಿಟ್ ವಿಚಾರಣೆ ವೇಳೆ ನಡೆದ ವಾದದ ಸಂದರ್ಭದಲ್ಲಿ, ಅರ್ಜಿದಾರರ ಪರ ವಕೀಲರಾದ ಸಜ್ಜನ್ ಪೂವಯ್ಯ, ರವಿ ಪ್ರಕರಣದಲ್ಲಿ ಸಿಐಡಿ ಅಧಿಕಾರಿಗಳು ತಪ್ಪು ಮಾಹಿತಿ ನೀಡಿದ್ದರು ಎಂದು ಹೇಳಿದ್ದಾರೆ. ಇದರಿಂದಾಗಿ ಮಾಧ್ಯಮಗಳು ಕೂಡಾ ಪೊಲೀಸ್ ಅಧಿಕಾರಿಗಳ ಹೇಳಿಕೆ ಉಲ್ಲೇಖಿಸಿ ವರದಿ ಮಾಡಿವೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದರು.
ರವಿ ಮಹಿಳಾ ಅಧಿಕಾರಿಗೆ ಕರೆ ಮಾಡಿದಾಗ ಅವರ ಪತಿ ಕೂಡಾ ಜೊತೆಯಲ್ಲೇ ಇದ್ದರು, ರವಿ ನಾಲ್ಕ ಬಾರಿ ಮಾತ್ರ ಕರೆ ಮಾಡಿದ್ದರು, 44 ಬಾರಿ ಅಲ್ಲ ಎಂದು ವಕೀಲರು ಕೋರ್ಟ್ ಗೆ ವಕೀಲರು ಮನವರಿಕೆ ಮಾಡಿಕೊಟ್ಟರು. ಡಿ.ಕೆ.ರವಿ ನಿಗೂಢ ಸಾವಿನ ಪ್ರಕರಣದಲ್ಲಿ ಮಹಿಳಾ ಐ.ಎ.ಎಸ್ ಅಧಿಕಾರಿ ಹೆಸರು ಕೂಡಾ ತಳುಕು ಹಾಕಿಕೊಂಡಿತ್ತು.