ಜಮ್ಮು-ಕಾಶ್ಮೀರ : ದುಖ್ತರನ್-ಎ-ಮಿಲ್ಲತ್ ಅಧ್ಯಕ್ಷೆ, ಕಾಶ್ಮೀರ ಪ್ರತ್ಯೇಕತಾವಾದಿ ಆಸಿಯಾ ಅಂದ್ರಾಬಿ ವಿರುದ್ಧ ಪಾಕಿಸ್ತಾನ ಧ್ವಜಾರೋಹಣೆ ಮಾಡಿರುವ ಆರೋಪ ಕೇಳಿಬಂದಿದ್ದು, ಎಫ್.ಐ.ಆರ್ ದಾಖಲಿಸಲಾಗಿದೆ.
ಮಾ.23ರಂದು ನಡೆದ ಪಾಕಿಸ್ತಾನ ದಿನಾಚರಣೆ ಸಂದರ್ಭದಲ್ಲಿ ನವದೆಹಲಿಯಲ್ಲಿ ಆಸಿಯಾ ಅಂದ್ರಾಬಿ ಪಾಕಿಸ್ತಾನ ಧ್ವಜಾರೋಹಣೆ ಮಾಡಿದ್ದರು. ಅಲ್ಲದೇ ಪಾಕ್ ನ ರಾಷ್ಟ್ರಗೀತೆನ್ನೂ ಕಾರ್ಯಕ್ರಮದಲ್ಲಿ ಹಾಡಿದ್ದಾರೆ ಎಂಬ ಆರೋಪವೂ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ಎಫ್.ಐ.ಆರ್ ದಾಖಲಿಸಲಾಗಿದೆ. ಕಾನೂನು ಬಾಹಿರ ಚಟುವಟಿಕೆಗಳ ನಿಷೇಧ ಕಾಯ್ದೆಯ ಸೆಕ್ಷನ್ 13ರಡಿಯಲ್ಲಿ ಆಸಿಯಾ ವಿರುದ್ಧ ಜಮ್ಮು-ಕಾಶ್ಮೀರದ ನೌಹಟ್ಟ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಪ್ರತ್ಯೇಕವಾದಿ ನಾಯಕಿ ಪಾಕಿಸ್ತಾನಿ ಧ್ವಜ ಹಾರಿಸಿದ ಆರೋಪದ ಮೇಲೆ ವಿಚಾರಣೆ ನಡೆಸಲಾಗುತ್ತಿದೆ, ಕಾನೂನಿನ ಪ್ರಕಾರ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ನೌಹಟ್ಟ ಪೊಲೀಸರು ಹೇಳಿದ್ದಾರೆ.
ಭಾರತದಲ್ಲಿ ಪಾಕಿಸ್ತಾನ ಧ್ವಜ ಹಾರಿಸಿದ್ದೂ ಅಲ್ಲದೇ, ಪಾಕ್ ರಾಷ್ಟ್ರಗೀತೆಯನ್ನು ಹಾಡಿರುವುದರಿಂದ ಆಸಿಯಾ ಬಂಧನಕ್ಕೊಳಗಾಗುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.