ನವದೆಹಲಿ : ಮಾಹಿತಿ ತಂತ್ರಜ್ಞಾನ ಕಾಯ್ದೆ ಸೆಕ್ಷನ್ 66(ಎ) ನನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿ ಮಹತ್ತರ ತೀರ್ಪು ನೀಡಿದೆ.
ನ್ಯಾಯಾಧೀಶರಾದ ಜೆ.ಚೆಲಮೇಶ್ವರ್ ಮತ್ತು ರೋಹಿಂಗ್ಟನ್ ನಾರಿಮನ್ ಅವರನ್ನೊಳಗೊಂಡ ಸುಪ್ರೀಂಕೋರ್ಟ್ ಪೀಠ ಮಾಹಿತಿ ತಂತ್ರಜ್ಞಾನ ಕಾಯ್ದೆ ಸೆಕ್ಷನ್ 66(ಎ)ನ್ನು ರದ್ದು ಪಡಿಸಿ ಆದೇಶ ಹೊರಡಿಸಿದೆ.
ಸೆಕ್ಷನ್ 66 ಎ ಗೆ ಸಾಂವಿಧಾನಿಕ ಮಾನ್ಯತೆಯೇ ಇಲ್ಲ ಎಂದು ನ್ಯಾಯಾಧೀಶರು ಹೇಳಿದ್ದಾರೆ. ಐಟಿ ಕಾಯ್ದೆ ಸೆಕ್ಷನ್ (66) ಎ ನಾಗರಿಕರ ಅಭಿವ್ಯಕ್ತಿ ಸ್ವಾಂತ್ರ್ಯಕ್ಕೆ ವಿರುದ್ಧವಾದದ್ದು, ಮೂಲಭೂತ ಹಕ್ಕಿನ ಉಲ್ಲಂಘನೆಯಾಗಿರುವಂತದ್ದು ಎಂದು ಆರೋಪಿಸಿ ಸಾರ್ವಜನಿಕ ಹೀತಾಸಕ್ತಿ ಅರ್ಜಿಗಳು ಸಲ್ಲಿಕೆಯಾಗಿದ್ದವು.
ಈ ಕಾಯ್ದೆಯಡಿ ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪಾರ್ಹ ಸಂದೇಶಗಳನ್ನು ಬಿತ್ತರಿಸುವವರನ್ನು ಬಂಧಿಸುವ ಅವಕಾಶವೂ ಇದೆ. ಹೀಗಾಗಿ ಈ ಕಾಯ್ದೆಯು ಅಂತರ್ಜಾಲ ಬಳಕೆದಾರರ ಸ್ವಾತಂತ್ರ್ಯವನ್ನು ಹತ್ತಿಕ್ಕಲಿದೆ ಎಂದು ಆರೋಪಿಸಿ ಸಾಕಷ್ಟು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳೂ ಸುಪ್ರೀಂ ಕೋರ್ಟ್ ನಲ್ಲಿ ಸಲ್ಲಿಕೆಯಾಗಿದ್ದವು.
ಮುಂಬೈ ಮೇಲೆ ನಡೆದ 26/11ರ ಭಯೋತ್ಪಾದಕ ದಾಳಿಯ ನಂತರ ಐಟಿ ಕಾಯ್ದೆಯನ್ನು ಆತುರವಾಗಿ ತಿದ್ದುಪಡಿ ಮಾಡಲಾಗಿತ್ತು. 2008ರ ಡಿಸೆಂಬರ್ 22ರಂದು ಇದನ್ನು ಲೋಕಸಭೆ ಅಂಗೀಕರಿಸಿತ್ತು.