ನವದೆಹಲಿ : ಐ.ಎ.ಎಸ್ ಅಧಿಕಾರಿ ರವಿ ಅವರ ನಿಗೂಢ ಸಾವು ಪ್ರಕರಣದಲ್ಲಿ ರಾಜ್ಯದ ಜನತೆಯ ಒತ್ತಾಯಕ್ಕೆ ವಿರುದ್ಧವಾಗಿ ನಡೆಯುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ ಹೈಕಮಾಂಡ್ ತರಾಟೆಗೆ ತೆಗೆದುಕೊಂಡಿದೆ.
ಸಿದ್ದರಾಮಯ್ಯ ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದ ಎ.ಐ.ಸಿ.ಸಿ ಅಧ್ಯಕ್ಷೆ ಸೋನಿಯಾ ಗಾಂಧಿ ರಾಜಕೀಯ ಕಾರ್ಯದರ್ಶಿ ಅಹ್ಮದ್ ಪಟೇಲ್, ಐ.ಎ.ಎಸ್ ಅಧಿಕಾರಿ ಸಾವಿನ ಪ್ರಕರಣವನ್ನು ಸಿಬಿಐ ತನಿಖೆ ನಡೆಸಬೇಕೆಂಬ ಜನತೆಯ ಒತ್ತಾಯವನ್ನು ಗಂಭೀರವಾಗಿ ಪರಿಗಣಿಸದೇ ಇರುವುದೇಕೆ ಎಂದು ಪ್ರಶ್ನಿಸಿದ್ದಾರೆ.
ಅಹ್ಮದ್ ಪಟೇಲ್ ಅವರೊಂದಿಗೂ ತಮ್ಮ ಮೊಂಡುವಾದವನ್ನು ಮುಂದುವರೆಸಿರುವ ಸಿದ್ದರಾಮಯ್ಯ, ಸಿಐಡಿ ತನಿಖೆಯೇ ಸಾಕು ಎಂಬ ಉತ್ತರ ನೀಡಿದ್ದಾರೆ. ಇದರಿಂದ ಆಕ್ರೋಶಗೊಂಡ ಸೋನಿಯಾ ಗಾಂಧಿ ಸಿದ್ದರಾಮಯ್ಯ ಅವರಿಗೆ ಕರೆ ಮಾಡಿ, ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಸೂಚಿಸಿದ್ದಾರೆ. ಸೋನಿಯಾ ಗಾಂಧಿ ಸೂಚನೆಗೆ ಸಿ.ಎಂ ಒಪ್ಪಿಗೆ ಸೂಚಿಸಿದ್ದು ರಾಜ್ಯ ಸರ್ಕಾರ ಸಿಬಿಐ ತನಿಖೆ ನಡೆಸುವ ಬಗ್ಗೆ ಸೋಮವಾರ ಆದೇಶ ನೀಡುವ ಸಾಧ್ಯತೆ ಇದೆ.
ಪ್ರಸ್ತುತ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ಸೋಮವಾರ ಸರ್ಕಾರಕ್ಕೆ ವರದಿ ಸಲ್ಲಿಸಲಿದ್ದು, ಬಳಿಕ ಸದನದಲ್ಲೇ ಸಿಎಂ ಸಿದ್ದರಾಮಯ್ಯ ಪ್ರಕರಣವನ್ನು ಸಿಬಿಐಗೆ ವಹಿಸುವ ನಿರ್ಧಾರ ಪ್ರಕಟಿಸಲಿದ್ದಾರೆ ಎಂಬ ಮಾಹಿತಿ ಬಹಿರಂಗವಾಗಿದೆ.
ಈ ಮಧ್ಯೆ, ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸುವಂತೆ ಒತ್ತಾಯಿಸಿ ರಾಜ್ಯಾದ್ಯಂತ ನಾನಾ ಸಂಘ ಸಂಸ್ಥೆಗಳಿಂದ ಪ್ರತಿಭಟನೆ ಇನ್ನಷ್ಟು ತೀವ್ರಗೊಂಡಿದೆ.