ಬೆಂಗಳೂರು : ದಕ್ಷ ಐ.ಎ.ಎಸ್ ಅಧಿಕಾರಿ ಡಿ.ಕೆ.ರವಿ ನಿಗೂಢ ಸಾವಿನ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಲು ಸಂಪುಟ ಸಚಿವರ ಒತ್ತಾಯದ ಹೊರತಾಗಿಯೂ ಸಿಬಿಐ ತನಿಖೆಗೆ ಒಪ್ಪಿಸುವ ಪ್ರಶ್ನೆಯೇ ಇಲ್ಲ ಎಂದು ರಾಜ್ಯ ಸರ್ಕಾರ ಸ್ಪಷ್ಟಪಡಿಸಿದೆ.
ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಕೆ.ಜೆ ಜಾರ್ಜ್, ಡಿ.ಕೆ ರವಿ ಪ್ರಕರಣವನ್ನು ಪ್ರಕರಣವನ್ನು ಈಗಾಗಲೇ ಸಿಐಡಿ ತನಿಖೆಗೆ ಒಪ್ಪಿಸಲಾಗಿದೆ ಆದ್ದರಿಂದ ಸಿಬಿಐ ತನಿಖೆಗೆ ವಹಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ರವಿ ಸಾವಿನ ಪ್ರಕರಣದ ತನಿಖೆಯನ್ನು ಸಿಬಿಐ ಗೆ ವಹಿಸಬೇಕೆಂದು ಸಿದ್ದರಾಮಯ್ಯ ಸಂಪುಟದ ಹಲವು ಸಚಿವರು ಒತ್ತಾಯಿಸಿದ್ದರು.
ಒಂದು ವೇಳೆ ಸಿಬಿಐ ತನಿಖೆಗೆ ವಹಿಸದೇ ಇದ್ದರೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರ ಏನನ್ನೋ ಮುಚ್ಚಿಡುತ್ತಿದೆ ಎಂಬ ಅನುಮಾನವೂ ಬಲವಾಗಲಿದೆ. ಈ ಹಿನ್ನೆಲೆಯಲ್ಲಿ ಸರ್ಕಾರದ ವಿರುದ್ಧ ಕೇಳಿಬರುತ್ತಿರುವ ಆರೋಪದಿಂದ ಪಾರಾಗಲು ಸಿಬಿಐ ತನಿಖೆಗೆ ಆದೇಶ ನೀಡುವುದು ಅನಿವಾರ್ಯ ಎಂದು ಸಚಿವರು ಅಭಿಪ್ರಾಯಪಟ್ಟಿದ್ದರು. ಸಚಿವರ ಒತ್ತಾಯಕ್ಕೂ ಮಣಿಯದ ಸರ್ಕಾರ ತನ್ನ ಧೋರಣೆಯನ್ನೇ ಮುಂದುವರೆಸಿದೆ.