ನವದೆಹಲಿ : ಒಂಬತ್ತು ರಾಜ್ಯಗಳಲ್ಲಿನ ಜಾಟ್ ಸಮುದಾಯಕ್ಕೆ ನೀಡಲಾಗಿರುವ ಇತರೇ ಹಿಂದುಳಿದ ಜಾತಿಗಳ ಮೀಸಲಾತಿಯನ್ನು ವಿಸ್ತರಿಸುವ ಕೇಂದ್ರ ಸರ್ಕಾರದ ಅಧಿಸೂಚನೆಯನ್ನು ರದ್ದುಗೊಳಿಸಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.
2014ರ ಡಿಸೆಂಬರ್ 17ರಂದು ಕಾದಿರಿಸಲಾಗಿದ್ದ ತೀರ್ಪನ್ನು ಮಂಗಳವಾರ ಜಸ್ಟಿಸ್ ರಂಜನ್ ಗೊಗೋಯ್ ಮತ್ತು ಜಸ್ಟಿಸ್ ರೋಹಿನ್ ಟನ್ ಫಾಲಿ ನಾರಿಮನ್ ಅವರು ಪ್ರಕಟಿಸಿದರು.
ಹಿಂದುಳಿದಿರುವಿಕೆಯನ್ನು ನಿರ್ಧರಿಸಲು ಜಾತಿಯು ಒಂದು ಪ್ರಮುಖ ಅಂಶ ಎನ್ನುವುದು ನಿಜವೇ ಆದರೂ ಅದೊಂದೇ ಅಂಶ ಈ ಕುರಿತ ನಿರ್ಧಾರಕ್ಕೆ ಮುಖ್ಯವಾಗುವುದಿಲ್ಲ ಎಂಬ ಕಾರಣಕ್ಕೆ ಜಾಟ್ ಸಮುದಾಯವನ್ನು ಹಿಂದುಳಿದ ವರ್ಗವೆಂದು ಪರಿಗಣಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿತು ಎಂದು ವಕೀಲರಾದ ಓಂ ವೀರ್ ಸಿಂಗ್ ತಿಳಿಸಿದ್ದಾರೆ.
ಒಬಿಸಿ ಪಟ್ಟಿಗೆ ಈ ಹಿಂದೆ ತಪ್ಪಾಗಿ ಸೇರಿಸಲ್ಪಟ್ಟಿರಬಹುದಾದ ಜಾತಿಯೊಂದನ್ನು (ಜಾಟ್) ಆ ನೆಲೆಯಲ್ಲೇ ಒಬಿಸಿ ಪಟ್ಟಿಯಲ್ಲಿ ಮುಂದುವರಿಸುವುದಕ್ಕೆ ಕಾರಣವಾಗಲಾರದು ಎಂದು ಸುಪ್ರೀಂ ಕೋರ್ಟ್ ಹೇಳಿರುವುದಾಗಿ ಅವರು ತಿಳಿಸಿದರು.
ಯುಪಿಎ ಸರಕಾರವು 2014ರ ಮೇ ತಿಂಗಳಲ್ಲಿ ಲೋಕಸಭಾ ಚುನಾವಣೆಗೆ ಸ್ವಲ್ಪವೇ ಮುನ್ನ ಜಾಟ್ ಸಮುದಾಯವನ್ನು ಒಬಿಸಿ ಪಟ್ಟಿಗೆ ಸೇರಿಸುವ ಆದೇಶವನ್ನು ಹೊರಡಿಸಿತ್ತು. ಆಶ್ಚರ್ಯಕರವೆಂಬಂತೆ ಮೋದಿ ಸರಕಾರ ಕೂಡ ಯುಪಿಎ ಸರಕಾರದ ಈ ನಿರ್ಧಾರವನ್ನು ಬೆಂಬಲಿಸಿ ಜಾಟ್ ಸಮುದಾಯಕ್ಕೆ ಮೀಸಲಾತಿಯನ್ನು ವಿಸ್ತರಿಸಿ ಅಧಿಸೂಚನೆ ಹೊರಡಿಸಿತ್ತು.