ನವದೆಹಲಿ : ಭಾರತ ಪ್ರವಾಸ ಕೈಗೊಂಡಿರುವ ಅಂತರರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್)ಮುಖ್ಯಸ್ಥೆ ಕ್ರಿಸ್ಟೀನ್ ಲಾಗರ್ಡ್, ಭಾರತವನ್ನು ಜಾಗತಿಕ ಆರ್ಥಿಕತೆ ಬೆಳವಣಿಗೆಗೆ ಸಹಕಾರಿಯಾಗಲಿರುವ ಉಜ್ವಲ ತಾಣವೆಂದು ಬಣ್ಣಿಸಿದ್ದಾರೆ.
ನರೇಂದ್ರ ಮೋದಿ ಅವರನ್ನು ಭೇಟಿ ಮಾಡುವುದಕ್ಕೂ ಮುನ್ನ ಮಾತನಾಡಿದ ಕ್ರಿಸ್ಟೀನ್ ಲಾಗರ್ಡ್, ಭಾರತದ ಆರ್ಥಿಕತೆ ಶೇ.7ಕ್ಕಿಂತಲೂ ಹೆಚ್ಚಿದ್ದು, ಮುಂದಿನ ದಿನಗಳಲ್ಲಿ ಜಗತ್ತಿನ ಡೈನಮಿಕ್ ಎಕಾನಮಿ ರಾಷ್ಟ್ರವಾಗಿ ಹೊರಹೊಮ್ಮುವ ಅವಕಾಶಗಳಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಫೆಬ್ರವರಿಯಲ್ಲಿ ಮಂಡನೆಯಾದ ಕೇಂದ್ರ ಸರ್ಕಾರದ ಪ್ರಥಮ ಪೂರ್ಣಾವಧಿ ಬಜೆಟ್ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿರುವ ಲಾಗರ್ಡ್, ಪ್ರಧಾನಿ ಮೋದಿ ಅವರ ಮೇಕ್ ಇನ್ ಇಂಡಿಯಾ ಅಭಿಯಾನವನ್ನೂ ಶ್ಲಾಘಿಸಿದ್ದಾರೆ. ಇದೇ ವೇಳೆ ಬಂಡವಾಳ ಹೂಡಿಕೆಗೆ ಮತ್ತಷ್ಟು ಆದ್ಯತೆ ನೀಡುವಂತೆ ಪ್ರಧಾನಿ ಮೋದಿ ಅವರಿಗೆ ಕ್ರಿಸ್ಟೀನ್ ಲಾಗರ್ಡ್ ಸಲಹೆ ನೀಡಿದ್ದಾರೆ.
ಭಾರತದ ಆರ್ಥಿಕತೆ ಚೀನಾವನ್ನೂ ಮೀರಿಸಿ ಬೆಳೆಯುತ್ತಿದೆ ಎಂದು ಇತ್ತೀಚೆಗಷ್ಟೇ ಐಎಂಎಫ್ ವರದಿ ನೀಡಿತ್ತು. ಅಲ್ಲದೇ ಕೆಲವೇ ವರ್ಷಗಳಲ್ಲಿ ಭಾರತ ಬಲಿಷ್ಠ ಆರ್ಥಿಕ ರಾಷ್ಟ್ರವಾಗಿ ಹೊರಹೊಮ್ಮಲಿದೆ ಎಂದು ಹೇಳಿತ್ತು.
ಪ್ರಧಾನಿ ನರೇಂದ್ರ ಮೋದಿ ಅಧಿಕಾರ ವಹಿಸಿಕೊಂಡ ಒಂದು ವರ್ಷದೊಳಗೆ ಹಣದುಬ್ಬರ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬಂದಿದ್ದು, ದೇಶದ ಜಿಡಿಪಿ ಏರಿಕೆ ಕಂಡಿದೆ. ಈ ಹಿನ್ನೆಲೆಯಲ್ಲಿ ವರದಿ ಪ್ರಕಟಿಸಿದ್ದ ಐಎಂಎಫ್ ಭಾರತ ಆರ್ಥಿಕ ಬೆಳವಣಿಗೆಯಲ್ಲಿ ಚೀನಾವನ್ನು ಹಿಂದಿಕ್ಕಲಿದೆ ಎಂದು ಹೇಳಿತ್ತು