ನವದೆಹಲಿ : 'ಸಿಬಿಐ' ಸಮನ್ಸ್ ಬಂದಿರುವುದರಿಂದ ನೋವುಂಟಾಗಿದೆ ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹೇಳಿದ್ದಾರೆ.
ಕಲ್ಲಿದ್ದಲು ಹಗರಣಕ್ಕೆ ಸಂಬಧಿಸಿದಂತೆ ಸಿಬಿಐ ಸಮನ್ಸ್ ನೀಡಿರುವುದಕ್ಕೆ ನವದೆಹಲಿಯಲ್ಲಿ ಪ್ರತಿಕ್ರಿಯೆ ನೀಡಿರುವ ಮಾಜಿ ಪ್ರಧಾನಿ, ಪ್ರಕರಣದ ಸಂಬಂಧ ಸತ್ಯಾಂಶ ಹೊರಬೀಳುವುದು ಮುಖ್ಯ ಎಂದಿದ್ದಾರೆ. ಈ ವರೆಗೂ ತಮಗೆ ಸಮನ್ಸ್ ಪ್ರತಿ ಲಭ್ಯವಾಗಿಲ್ಲ, ಪ್ರತಿ ಕೈಸೇರಿದ ನಂತರ ವಕೀಲರೊಂದಿಗೆ ಚರ್ಚೆ ನಡೆಸುವುದಾಗಿ ತಿಳಿಸಿದ್ದಾರೆ.
ಹಗರಣದ ಸಂಬಂಧ ನಡೆಯುತ್ತಿರುವ ತನಿಖೆಗೆ ಸಂಪೂರ್ಣವಾಗಿ ಸಹಕರಿಸುವುದಾಗಿ ಮನಮೋಹನ್ ಸಿಂಗ್ ತಿಳಿಸಿದ್ದಾರೆ. ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಕೈಗಾರಿಕೋದ್ಯಮಿ ಕುಮಾರ್ ಮಂಗಲಂ ಬಿರ್ಲಾ, ಕಲ್ಲಿದ್ದಲು ಇಲಾಖೆಯ ಮಾಜಿ ಕಾರ್ಯದರ್ಶಿ ಪಿ.ಸಿ ಪರಾಖ್, ಹಿಂಡಾಲ್ಕೋ ಕಂಪನಿಯ ಡಿ ಭಟ್ಟಾಚಾರ್ಯ ಹಾಗೂ ಶುಭೇಂದು ಅಮಿತಾಭ್ ಗೆ ಸಿಬಿಐ ನಿಂದ ಸಮನ್ಸ್ ನೀಡಲಾಗಿದೆ. ಏ.8ರೊಳಗೆ ಮನಮೋಹನ್ ಸಿಂಗ್ ವಿಚಾರಣೆಗೆ ಹಾಜರಾಗಬೇಕಿದೆ.