ನವದೆಹಲಿ : 'ಭಾರತ' ರೇಪಿಸ್ಟ್ ಗಳ ರಾಷ್ಟ್ರ ಎಂಬ ಕಾರಣ ನೀಡಿ ಭಾರತೀಯ ವಿದ್ಯಾರ್ಥಿಗೆ ಪ್ರವೇಶ ನಿರಾಕರಿಸಿದ್ದ ಜರ್ಮನಿ ವಿಶ್ವವಿದ್ಯಾನಿಲಯದ ಮುಖ್ಯಸ್ಥರನ್ನು ಭಾರತದಲ್ಲಿರುವ ಜರ್ಮನಿ ರಾಯಭಾರಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಲೈಪ್ಜಿಗ್ ವಿಶ್ವವಿದ್ಯಾಲಯಕ್ಕೆ ಪತ್ರ ಬರೆದಿರುವ ಜರ್ಮನಿಯ ರಾಯಭಾರಿ ಮೈಕೆಲ್ ಸ್ಟೀನರ್, ಮಿತಿಮೀರಿದ ಸಾಮಾನ್ಯೀಕರಣವನ್ನು ಅನುಸರಿಸುವ ಮೂಲಕ ಭಾರತೀಯ ವಿದ್ಯಾರ್ಥಿಗೆ ಪ್ರವೇಶ ನೀಡದೇ ಇರದೇ ಇರುವುದು ಅಪರಾಧ ಎಂದು ಎಚ್ಚರಿಕೆ ನೀಡಿದ್ದಾರೆ.
ಭಾರತ ರೇಪಿಸ್ಟ್ ಗಳ ರಾಷ್ಟ್ರವಲ್ಲ, ಭಾರತದಂತಹ ಕ್ರಿಯಾತ್ಮಕ ಮತ್ತು ಆಕರ್ಷಕ ದೇಶದ ಬಗ್ಗೆ ಹೆಚ್ಚು ತಿಳಿದುಕೊಳ್ಳಬೇಕಿದೆ. ಪ್ರಾಧ್ಯಾಪಕರಾಗಿದ್ದುಕೊಂಡು ಭಾರತದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವುದು ಸೂಕ್ತ ಅಲ್ಲ ಎಂದು ಸ್ಟೀನರ್ ಜರ್ಮನ್ ವಿವಿಯ ಪ್ರಾಧ್ಯಾಪಕರಿಗೆ ತಿಳಿಸಿದ್ದಾರೆ.
ಲೈಪ್ಜಿಗ್ ವಿಶ್ವವಿದ್ಯಾಲಯದಲ್ಲಿ ತರಬೇತಿ ಪಡೆಯಲು ಭಾರತೀಯ ವಿದ್ಯಾರ್ಥಿ ಸಲ್ಲಿಸಿದ್ದ ಅರ್ಜಿಯನ್ನು ವಿಶ್ವವಿದ್ಯಾನಿಲಯದ ಮುಖ್ಯಸ್ಥರು, ಭಾರತದಲ್ಲಿರುವ ಅತ್ಯಾಚಾರ ಸಂಸ್ಕೃತಿಯ ಕಾರಣ ನೀಡಿ ವಜಾಗೊಳಿಸಿದ್ದಾರೆ.
ಜರ್ಮನ್ ವಿವಿಯ ಈ ಕ್ರಮ ಟ್ವಿಟರ್ ಹಾಗೂ ಫೇಸ್ ಬುಕ್ ನಲ್ಲಿ ತೀವ್ರ ಖಂಡನೆಗೆ ಒಳಗಾಗಿತ್ತು. ತಕ್ಷಣವೇ ಎಚ್ಚೆತ್ತ, ಜರ್ಮನಿಯ ರಾಯಭಾರಿ ಮೈಕೆಲ್ ಸ್ಟೀನರ್, ವಿಶ್ವವಿದ್ಯಾಲಯಕ್ಕೆ ಪತ್ರ ಬರೆದಿದ್ದು, ಭಾರತದ ಬಗ್ಗೆ ಕೇವಲವಾಗಿ ಮಾತನಾಡದಂತೆ ಎಚ್ಚರಿಸಿದ್ದಾರೆ. ಮಹಿಳೆಯರನ್ನು ಗೌರವಿಸುವ ದೇಶದ ಬಗ್ಗೆ ಮತ್ತಷ್ಟು ತಿಳಿದುಕೊಳ್ಳಿ ಎಂದು ಸಲಹೆ ನೀಡಿದ್ದಾರೆ, ಅಲ್ಲದೇ ಭಾರತ ಅತ್ಯಾಚಾರಿಗಳ ರಾಷ್ಟ್ರ ಎಂಬ ಕಾರಣ ಮುಂದಿಟ್ಟುಕೊಂಡು ವಿದ್ಯಾರ್ಥಿಗೆ ಪ್ರವೇಶ ನಿರಾಕರಣೆ ಮಾಡಿದ್ದನ್ನು ತೀವ್ರವಾಗಿ ಖಂಡಿಸಿದ್ದಾರೆ.
ಪ್ರವೇಶ ನಿರಾಕರಿಸಿದ್ದಕ್ಕಾಗಿ ಜರ್ಮನ್ ರಾಯಭಾರಿ ಕಚೇರಿಯ ವೆಬ್ ಸೈಟ್ ನಲ್ಲಿ ಬಹಿರಂಗವಾಗಿ ಕ್ಷಮೆಯಾಚಿಸಿರುವ ಜರ್ಮನ್ ಪ್ರಾಧ್ಯಾಪಕಿ, ಭಾರತದ ಬಗ್ಗೆ ಕೇವಲವಾಗಿ ಮಾತನಾಡಿದ್ದು ತಪ್ಪು ಎಂದು ಹೇಳಿದ್ದಾರೆ.