ಉಡುಪಿ : ಬಿಜೆಪಿ ಮುಖಂಡರು ಸಂಸ್ಕೃತಿ ಬಗ್ಗೆ ಮಾತನಾಡುತ್ತಾರೆ. ಆದರೆ ಗೋವಾದಲ್ಲಿ ಶ್ರೀರಾಮಸೇನೆಯನ್ನು ನಿಷೇಧ ಹೇರಿದ್ದರ ಬಗ್ಗೆ ಯಾಕೆ ಮಾತನಾಡುತ್ತಿಲ್ಲ. ಗೋವಾದಲ್ಲಿ ಡ್ರಗ್, ಸೆಕ್ಸ್ ಮಾಫಿಯಾ ಹೆಚ್ಚಿದೆ. ಈ ಬಗ್ಗೆ ಹೋರಾಟ ಮಾಡುತ್ತಿರುವ ನಮ್ಮ ಮೇಲೇಕೆ ನಿಷೇಧ ಎಂದು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಪ್ರಶ್ನಿಸಿದ್ದಾರೆ.
ಉಡುಪಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಗೋವಾದಲ್ಲಿ ಬಿಜೆಪಿ ಸರ್ಕಾರ ಇದ್ದರೂ ನಮ್ಮ ಸಂಘಟನೆ ಮೇಲೆ ನಿಷೇಧ ಹೇರಿದೆ. ಆದರೆ ಈ ನಿಷೇಧದ ವಿರುದ್ಧ ಗೋವಾ ಹೈಕೋರ್ಟ್ ನಲ್ಲಿ ಹೋರಾಟ ಮುಂದುವರಿಸುವುದಾಗಿ ಹೇಳಿದರು.
ಶಿವಮೊಗ್ಗದಲ್ಲಿ ನಡೆದ ಗುಂಪು ಘರ್ಷಣೆಗೆ ಕಾಂಗ್ರೆಸ್ ಸರ್ಕಾರವೇ ಕಾರಣ ಎಂದು ಆರೋಪಿಸಿದರು. ಪಿಎಫ್ಐ ಕಾರ್ಯಕ್ರಮದಲ್ಲಿ ಗಲಭೆ ನಡೆಯುವ ಮುನ್ಸೂಚನೆ ಸರ್ಕಾರಕ್ಕೆ ಇತ್ತು. ಆದರೂ ಕಾರ್ಯಕ್ರಮ ನಡೆಸಲು ಸರ್ಕಾರ ಅನುಮತಿ ಕೊಟ್ಟಿದ್ದೇಕೆ ಎಂದು ಪ್ರಶ್ನಿಸಿದರು.
ಪಿಎಫ್ಐ ದೇಶದ್ರೋಹಿ ಸಂಘಟನೆ. ಹಾಗಾಗಿ ರಾಜ್ಯದಲ್ಲೂ ಈ ಸಂಘಟನೆಗೆ ನಿಷೇಧ ಹೇರಬೇಕು ಎಂದು ಮುತಾಲಿಕ್ ಈ ಸಂದರ್ಭದಲ್ಲಿ ಸರ್ಕಾರಕ್ಕೆ ಒತ್ತಾಯಿಸಿದರು.