ನವದೆಹಲಿ : ಹಲವಾರು ಕಾರ್ಯಕರ್ತರು ಹಾಗೂ ಮುಖಂಡರ ಬೇಡಿಕೆಗೆ ಕೊನೆಗೂ ಮಣಿಯಲು ಮುಂದಾಗಿರುವ ಕಾಂಗ್ರೆಸ್ ಹೈಕಮಾಂಡ್, ಪ್ರಿಯಾಂಕಾ ಗಾಂಧಿ ಅವರಿಗೆ ಶೀಘ್ರದಲ್ಲೇ ಪ್ರಧಾನ ಕಾರ್ಯದರ್ಶಿ ಹುದ್ದೆ ನೀಡುವ ಸಾಧ್ಯತೆ ಇದೆ.
ಪ್ರಿಯಾಂಕಾ ಅವರನ್ನು ಸಕ್ರಿಯ ರಾಜಕಾರಣಕ್ಕೆ ಕರೆತರಲು ಕಳೆದ 3 ತಿಂಗಳಿನಿಂದ ಉಪಾಧ್ಯಕ್ಷ ರಾಹುಲ್ ಗಾಂಧಿ ಪ್ರಯತ್ನಿಸಿದ್ದಾರೆ. ಅದಕ್ಕೆ ಈಗ ಹಿರಿಯ ನಾಯಕರ ಬೆಂಬಲವೂ ದೊರೆತಿದೆ ಎನ್ನಲಾಗಿದೆ. ಪ್ರಿಯಾಂಕಾ ಅವರಿಗೆ ಪಕ್ಷದಲ್ಲಿ ಅತ್ಯಂತ ಮಹತ್ವದ ಹುದ್ದೆ ನೀಡಬೇಕು ಎಂಬುದು ರಾಹುಲ್ ಬೇಡಿಕೆಯಾಗಿದೆ. ಹೀಗಾಗಿ ಅವರಿಗೆ ಪ್ರಧಾನ ಕಾರ್ಯದರ್ಶಿ ಹುದ್ದೆ ಲಭಿಸಬಹುದು ಎಂದು ಖಾಸಗಿ ಮಾಧ್ಯಮ ವರದಿ ಮಾಡಿದೆ.
ಲೋಕಸಭೆ ಚುನಾವಣೆ ಯಲ್ಲಿ ಕಾಂಗ್ರೆಸ್ ಹೀನಾಯವಾಗಿ ಪರಾಭವಗೊಂಡ ಬಳಿಕ ಪ್ರಿಯಾಂಕಾ ಅವರನ್ನು ರಾಜಕೀಯಕ್ಕೆ ಕರೆತರಬೇಕು ಎಂಬ ಕೂಗು ಕಾಂಗ್ರೆಸ್ಸಿನಲ್ಲಿ ಎದ್ದಿತ್ತು. ಆನಂತರ ಹಲವು ವಿಧಾನಸಭೆ ಚುನಾವಣೆಗಳಲ್ಲಿ ಪಕ್ಷ ಸೋತಾಗಲೂ ಕಾರ್ಯಕರ್ತರಿಂದ ಇದೇ ಬೇಡಿಕೆ ವ್ಯಕ್ತವಾಗಿತ್ತು.
ರಾಹುಲ್ ಕಾಂಗ್ರೆಸ್ ಅಧ್ಯಕ್ಷರಾಗಿ ನೇಮಕಗೊಳ್ಳಬಹುದು ಎಂಬ ವರದಿಗಳ ಬೆನ್ನಲ್ಲೇ ಪ್ರಿಯಾಂಕಾ ರಾಜಕೀಯ ಸೇರ್ಪಡೆ ವಿಷಯ ಮಹತ್ವ ಪಡೆದುಕೊಂಡಿದೆ.