Hebbal : 'ನೀರಿನ ಟ್ಯಾಂಕರ್' ಗೆ ಸಿಲುಕಿ ಇಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆಯನ್ನು ಖಂಡಿಸಿ ಹೆಬ್ಬಾಳದಲ್ಲಿ ವಿದ್ಯಾರ್ಥಿಗಳು ಹಾಗೂ ಕೆಲ ಸಂಘಟನೆಗಳ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸುತ್ತಿದ್ದಾರೆ.
ಕೆಂಪಾಪುರ ಜಂಕ್ಷನ್ ಬಳಿಯ ದೇವನಹಳ್ಳಿ-ಬೆಂಗಳೂರು ಮುಖ್ಯ ರಸ್ತೆಯಲ್ಲಿ ವಾಹನಗಳು ಅತಿ ವೇಗವಾಗಿ ಚಲಿಸುತ್ತವೆ, ಪರಿಣಾಮ, ಅತಿ ಹೆಚ್ಚು ಅಪಘಾತಗಳು ಸಂಭವಿಸುತ್ತವೆ. ಅಪಘಾತಗಳನ್ನು ತಪ್ಪಿಸಲು ಸ್ಕೈವಾಕ್ ನ್ನು ನಿರ್ಮಿಸಲು ಆಗ್ರಹಿಸಿ ಸ್ಥಳೀಯರು ಪ್ರತಿಭಟನೆ ನಡೆಸುತ್ತಿದ್ದಾರೆ.
ಪ್ರತಿಭಟನೆ ಪರಿಣಾಮ ಏರ್ ಪೋರ್ಟ್ ನಿಂದ ನಗರಕ್ಕೆ ಬರುವ ರಸ್ತೆಯಲ್ಲಿ ಕಿಲೋಮೀಟರ್ ಗಟ್ಟಲೆ ವಾಹನ ದಟ್ಟಣೆ ಉಂಟಾಗಿದೆ. ಎಸ್ಟೀಮ್ ಮಾಲ್ ನಿಂದ ಯಲಹಂಕಾದ ವರೆಗೂ ಟ್ರಾಫಿಕ್ ಜಾಮ್ ಉಂಟಾಗಿದ್ದು ವಾಹನಗಳು ನಿಂತಲ್ಲೇ ನಿಂತಿವೆ.
ಫೆ.26ರಂದು ಹೆಬ್ಬಾಳದ ಕೆಂಪಾಪುರದ ಬಳಿ ನೀರಿನ ಟ್ಯಾಂಕರ್ವೊಂದು ದ್ವಿಚಕ್ರವಾಹನಕ್ಕೆ ಡಿಕ್ಕಿಹೊಡೆದು ಬಳಿಕ ರಸ್ತೆ ದಾಟುತ್ತಿದ್ದ ಪಾದಚಾರಿಗಳ ಮೇಲೆ ಹರಿದ ಪರಿಣಾಮ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದರು. ಈ ಐವರು ಗಂಭೀರವಾಗಿ ಗಾಯಗೊಂಡಿದ್ದರು. ಈ ಘಟನೆಯಲ್ಲಿ ಸಿಂಧಿ ಕಾಲೇಜಿನ ವಿದ್ಯಾರ್ಥಿನಿ ಅರ್ಪಿತಾ ಕೂಡಾ ಸಾವನ್ನಪ್ಪಿದ್ದರು. ಘಟನೆ ಖಂಡಿಸಿ ನಡೆಸುತ್ತಿರುವ ಪ್ರತಿಭಟನೆಯಲ್ಲಿ ಕೆಂಪಾಪುರ ಜಂಕ್ಷನ್ ಬಳಿ ಇರುವ ಸಿಂಧಿ, ವಿದ್ಯಾನಿಕೇತನ, ಪ್ರೆಸಿಡೆನ್ಸಿ ಕಾಲೇಜು ವಿದ್ಯಾರ್ಥಿಗಳೂ ಭಾಗವಹಿಸಿದ್ದಾರೆ. ಪ್ರತಿಭಟನಾಕಾರರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.
ವಾಹನಗಳು ಅತಿ ವೇಗವಾಗಿ ಚಲಿಸುವುದರಿಂದ ರಸ್ತೆ ದಾಟಲು ಅನುಕೂಲವಾಗುವಂತೆ ಸ್ಕೈವಾಕ್ ನಿರ್ಮಿಸಬೇಕೆಂದು ಸ್ಥಳೀಯ ಜನಪ್ರತಿನಿಧಿಗಳಿಗೆ ಮನವಿ ಮಾಡಿದರೂ, ಮನವಿಗೆ ಸ್ಪಂದಿಸುತ್ತಿಲ್ಲ ಎಂದು ಪ್ರತಿಭಟನಾ ನಿರತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.