ಬೆಂಗಳೂರು : ಖಾತೆ ಬದಲಾವಣೆ ಬಯಸಿ ರಾಜೀನಾಮೆ ನೀಡಿದ್ದ ಅಬಕಾರಿ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಕೊನೆಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೆಚ್ಚುವರಿ ಖಾತೆ ನೀಡಲು ಮುಂದಾಗಿದ್ದಾರೆ.
ಈ ಕುರಿತು ಸಿಎಂ ಅಧಿಕೃತವಾಗಿ ತಮ್ಮ ಕಚೇರಿಯಿಂದ ರಾಜಭವನಕ್ಕೆ ಪತ್ರ ರವಾನಿಸಲು ನಿರ್ಧರಿಸಿದ್ದು, ಈ ಸಂಬಂಧ ತಮ್ಮ ಆಪ್ತರ ಜತೆ ಚರ್ಚಿಸಿ, ಅಂತಿಮ ನಿರ್ಧಾರ ತೆಗೆದುಕೊಂಡಿದ್ದಾರೆ.
ಸಮಾಜ ಕಲ್ಯಾ ಖಾತೆ ಕೋರಿ ಜಾರಕಿಹೊಳಿ ಅವರು ರಾಜೀನಾಮೆ ನೀಡಿದ್ದರು. ಆದರೆ ಅದು ಸಿದ್ದರಾಮಯ್ಯ ಆಪ್ತರಾದ ಆಂಜನೇಯ ಅವರ ಬಳಿ ಇದೆ. ರಾಜೀನಾಮೆ ಪ್ರಹಸನ ಮುಕ್ತಾಯಗೊಳಿಸುವಾಗ ಜಾರಕಿಹೊಳಿ ಅವರಿಗೆ ತಮ್ಮ ಬಳಿ ಇರುವ ಸಣ್ಣ ಕೈಗಾರಿಕೆ ಖಾತೆ ನೀಡುವುದಾಗಿ ಭರವಸೆ ನೀಡಿದ್ದರು.
ದಲಿತ ಸಿಎಂ ವಾದ ತಾರಕಕ್ಕೇರಿದ ಸಂದರ್ಭದಲ್ಲಿ ಜಾತಿ ಲೆಕ್ಕಾಚಾರ ನಡೆಸಿರುವ ಸಿದ್ದರಾಮಯ್ಯ ಬಣ ತಕ್ಷಣ ಜಾರಕಿಹೊಳಿ ಅವರಿಗೆ ಹೆಚ್ಚುವರಿಯಾಗಿ ಸಣ್ಣ ಕೈಗಾರಿಕಾ ಖಾತೆ ನೀಡಲು ಮುಂದಾಗಿದ್ದಾರೆ ಎನ್ನಲಾಗಿದೆ.