ನವದೆಹಲಿ : ಮುಸ್ಲಿಮರು ದಿನಕ್ಕೆ ಐದು ಬಾರಿ ಯೋಗ ಮಾಡುತ್ತಾರೆ ಮತ್ತು ಪ್ರವಾದಿ ಮಹಮದ್ ಅತಿ ದೊಡ್ಡ ಯೋಗಿ ಎಂದು ಬಿಜೆಪಿ ಹಿರಿಯ ನಾಯಕ ಮುರಳಿ ಮನೋಹರ್ ಜೋಷಿ ಹೇಳಿದ್ದಾರೆ.
ದೆಹಲಿಯಲ್ಲಿ ”ಹೊಸ ಯುಗಕ್ಕೆ ಅಯ್ಯಂಗಾರ್ ಅವರ ಯೋಗ ಮಾರ್ಗ’ ಎಂಬ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ನಮ್ಮ ಮುಸ್ಲಿಂ ಬಾಂಧವರು ದಿನಕ್ಕೆ ಐದು ಬಾರಿ ಯೋಗ ಮಾಡುತ್ತಾರೆ. ಆ ನಮಾಜ್ ಮಾಡುವ ಭಂಗಿಗಳು... ಆದುದರಿಂದಲೆ ನನಗನ್ನಿಸುತ್ತದೆ ಪ್ರವಾದಿ ಮೊಹಮ್ಮದ್ ಅವರು ಅತಿ ದೊಡ್ಡ ಯೋಗಿಯಾಗಿದ್ದರು ಎಂದು ಅಭಿಪ್ರಾಯವ್ಯಕ್ತಪಡಿಸಿದರು.
ಯೋಗ ಪ್ರತಿ ಸಾಮಾನ್ಯ ಮನುಷ್ಯನ ಜೀವನದ ಭಾಗವಾದರೆ, ಅದು ದೇಶದಲ್ಲಿ ರೇಪ್ ಪ್ರಕರಣ ಸಂಖ್ಯೆಗಳನ್ನು ಕಡಿತಗೊಳಿಸಲು ನೆರವಾಗುತ್ತದೆ ಎಂದು ತಿಳಿಸಿದ್ದಾರೆ.
ನ್ಯೂಯಾರ್ಕ್ ನಲ್ಲಿ ಮಹರ್ಷಿ ಮಹೇಶ್ ಯೋಗಿ ನಡೆಸಿದ ಧ್ಯಾನ ಪ್ರಯೋಗದ ಬಗ್ಗೆ ಉದಾಹರಿಸಿದ ಜೋಷಿ, ಅಲ್ಲಿನ ವಿಶ್ವವಿದ್ಯಾಲಯದ ಉಪಕುಲಪತಿಗಳೊಬ್ಬರು ನಡೆಸಿದ ಅಧ್ಯಯನದ ಪ್ರಕಾರ ನ್ಯೂಯಾರ್ಕ್ ನಲ್ಲಿ ಜೈಲುವಾಸಿಗಳು ಯೋಗ ಮಾಡಿದ ನಂತರ ಅಪರಾಧಗಳ ಸಂಖ್ಯೆ ಕಡಿಮೆಯಾಗಿತ್ತಂತೆ ಎಂದಿದ್ದಾರೆ.