ವಾಷಿಂಗ್ಟನ್ : ಇಸ್ಲಾಂ ಹೆಸರಲ್ಲಿ ಮುಗ್ಧರ ಮಾರಣಹೋಮ ನಡೆಸುವ ಉಗ್ರರು ಧಾರ್ಮಿಕ ಮುಖಂಡರಲ್ಲ, ಅವರು ಭಯೋತ್ಪಾದಕರು ಎಂದು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಕಿಡಿಕಾರಿದ್ದಾರೆ.
ಸುಳ್ಳು ಭರವಸೆಗಳ ಉಗ್ರವಾದವನ್ನು ಪಾಶ್ಚಾತ್ಯ ಮತ್ತು ಮುಸ್ಲಿಂ ಮುಖಂಡರು ಒಗ್ಗಟ್ಟಾಗುವ ಮೂಲಕ ಕೊನೆಗಾಣಿಸಬೇಕು. ಅಲ್ಲದೇ ಇಸ್ಲಾಂ ಅನ್ನು ಪ್ರತಿನಿಧಿಸುವ ಭಯೋತ್ಪಾದನಾ ಸಂಘಟನೆಗಳನ್ನು ತಿರಸ್ಕರಿಸಬೇಕು ಎಂದು ಕರೆ ನೀಡಿದ್ದಾರೆ.
ಭಯೋತ್ಪಾದನೆ ವಿರುದ್ಧದ ಹೋರಾಟದ ಮೂರು ದಿನಗಳ ಸಮ್ಮೇಳನದಲ್ಲಿ ಭಾಗವಹಿಸಿ ಒಬಾಮ ಮಾತನಾಡಿದರು. ಈ ಸಮ್ಮೇಳನದಲ್ಲಿ ಸುಮಾರು 60 ದೇಶಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ಈ ಭಯೋತ್ಪಾದಕರು ಕೋಟ್ಯಂತರ ಮುಸ್ಲಿಮರ ಜೊತೆ ಮಾತನಾಡಲಾರರು. ಹಾಗಾಗಿ ಯುರೋಪ್ ಮತ್ತು ಮಧ್ಯ ಏಷ್ಯಾಗಳಲ್ಲಿ ಪೈಶಾಚಿಕ ಕೃತ್ಯ ಎಸಗುತ್ತಿರುವ ಭಯೋತ್ಪಾದನೆಯನ್ನು ಹತ್ತಿಕ್ಕಬೇಕಾಗಿದೆ ಎಂದು ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
ಐಸಿಸ್ ಅಥವಾ ಅಲ್ ಖೈದಾದಂತಹ ಉಗ್ರಗಾಮಿ ಸಂಘಟನೆಗಳ ಇಸ್ಲಾಂ ಅನ್ನು ಸುಳ್ಳಿನ ಮೂಲಕ ನಿರೂಪಿಸಿದ್ದನ್ನು ಇಸ್ಲಾಂ ಒಪ್ಪಿಕೊಂಡಿದೆ. ಈ ನಿಟ್ಟಿನಲ್ಲಿ ಉಗ್ರರು ತಮ್ಮನ್ನು ತಾವು ಧಾರ್ಮಿಕ ಮುಖಂಡರು ಎಂಬುದನ್ನು ತೋರ್ಪಡಿಸಲು ಯತ್ನಿಸುತ್ತಿದ್ದಾರೆ. ಅಷ್ಟೇ ಅಲ್ಲ ಮುಗ್ದರನ್ನು ಕೊಲ್ಲುವುದು ಪವಿತ್ರ ಯುದ್ಧ ಎಂಬುದಾಗಿ ನಿರೂಪಿಸುತ್ತಿದ್ದಾರೆ ಎಂದು ವಿಶ್ಲೇಷಿಸಿದರು.
ಇಸ್ಲಾಂ ಹೆಸರಲ್ಲಿ ಮುಗ್ಧರ ಮಾರಣಹೋಮ ನಡೆಸುವ ಉಗ್ರರು ಧಾರ್ಮಿಕ ಮುಖಂಡರಲ್ಲ, ಅವರು ಭಯೋತ್ಪಾದಕರು. ನಾವು ಇಸ್ಲಾಂ ಜೊತೆಗೆ ಯುದ್ಧ ಮಾಡುವುದಿಲ್ಲ. ಆದರೆ ಇಸ್ಲಾಂ ಹೆಸರಿನಲ್ಲಿ ಸುಳ್ಳು ಹೇಳಿ ಉಗ್ರವಾದ ನಡೆಸುತ್ತಿರುವವರನ್ನು ಬಗ್ಗು ಬಡಿಯಬೇಕಾಗಿದೆ ಎಂದರು.
ಭಯೋತ್ಪಾದನೆಯನ್ನು ಕೇವಲ ಮಿಲಿಟರಿ ಶಕ್ತಿಯಿಂದಲೇ ಜಯಿಸಲು ಸಾಧ್ಯವಿಲ್ಲ ಎಂದು ಹೇಳಿದರು. ಇದಕ್ಕೆ ಆಯಾಯ ಧರ್ಮದವರ ಪಾತ್ರವೂ ಮುಖ್ಯವಾಗುತ್ತದೆ ಎಂದು ತಿಳಿಸಿದರು.