ಬಗ್ಧಾದ್ : ಐಸಿಸ್ ಉಗ್ರರು ಇರಾಕ್ ನ ಪಶ್ಚಿಮ ಪ್ರಾಂತ್ಯವಾಗಿರುವ ಅನ್ ಬಾರ್ ನಲ್ಲಿ ಹೆಚ್ಚಿನ ಸಂಖ್ಯೆಯ ಭದ್ರತಾ ಸಿಬಂದಿಗಳು ಸೇರಿದಂತೆ 40ಕ್ಕೂ ಹೆಚ್ಚು ಮಂದಿಯನ್ನು ಸಜೀವ ದಹನ ಮಾಡಿರುವ ಪೈಶಾಚಿಕ ಕೃತ್ಯ ಬಹಿರಂಗವಾಗಿದೆ.
ಪೊಲೀಸ್ ಮುಖ್ಯಸ್ಥ ಕಾಸಿಂ ಅಲ್ ಉಬೇದಿ ಅವರನ್ನು ಉಲ್ಲೇಖೀಸಿರುವ ಮಾಧ್ಯಮ ವರದಿಗಳು, ಅಲ್ ಬಗ್ಧಾದಿ ಪಟ್ಟಣದಲ್ಲಿ ಸುಮಾರು 30ರಿಂದ 45 ಮಂದಿಯನ್ನು ಐಸಿಸ್ ಉಗ್ರರು ಜೀವಂತ ಸುಟ್ಟು ಕೊಂದಿದ್ದಾರೆ. ಇವರಲ್ಲಿ ಹೆಚ್ಚಿನವರು ಆಲ್ ಬು ಉಬೇದ್ ಸುನ್ನಿ ಪಂಗಡಕ್ಕೆ ಸೇರಿದವರಾಗಿದ್ದಾರೆ.
ಇವರಲ್ಲಿ ಸರಕಾರ ಬೆಂಬಲಿತ ಸಹ್ ವಾ ಅರೆ ಸೈನಿಕ ದಳಕ್ಕೆ ಸೇರಿದ ಪೊಲೀಸರು ಹಾಗೂ ಭದ್ರತಾ ಸಿಬಂದಿಗಳು ಸೇರಿದ್ದಾರೆ ಎಂದು ಅಧಿಕಾರಿಗಳು ಹೇಳಿರುವುದನ್ನು ಕ್ಸಿನ್ ಹುವಾ ವಾರ್ತಾ ಸಂಸ್ಥೆ ಉಲ್ಲೇಖೀಸಿದೆ.
ಐಸಿಸ್ ಉಗ್ರರು ಈ ಪೈಶಾಚಿಕ ಕೃತ್ಯ ನಡೆಸಿರುವ ಪಟ್ಟಣ ಪ್ರಮುಖ ವಾಯುನೆಲೆಯಾಗಿರುವ ಐನ್ ಅಲ್ ಅಸದ್ಗೆ ಸಮೀಪದಲ್ಲೇ ಇದೆ. ಈ ವಾಯು ನೆಲೆಯಲ್ಲಿ 300ಕ್ಕೂ ಅಧಿಕ ಅಮೆರಿಕದ ನೌಕಾ ಪಡೆ ಸಿಬಂದಿಗಳು ಇದ್ದಾರೆ.