ವಾಷಿಂಗ್ ಟನ್ : ಉಗ್ರವಾದದ ವಿರುದ್ಧ ಸಮರ ಸಾರಿರುವ ವಿಶ್ವದ ದೊಡ್ಡಣ್ಣ ಅಮೆರಿಕ, ಭಯೋತ್ಪಾದನೆಗೆ ಇತಿಶ್ರೀ ಹಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಕೈಗೊಂಡಿದ್ದು ಸುಮಾರು 60ಕ್ಕೂ ಹೆಚ್ಚು ರಾಷ್ಟ್ರಗಳೊಂದಿಗೆ ಸಭೆ ನಡೆಸಲು ಮುಂದಾಗಿದೆ.
ವಾಷಿಂಗ್ಟನ್ ನ ಶ್ವೇತಭವನದಲ್ಲಿ ಇಂದಿನಿಂದ ಪ್ರಾರಂಭವಾಗಿರುವ ಸಮಾವೇಶದಲ್ಲಿ, ಭಯೋತ್ಪಾದನೆ ತಡೆಗಟ್ಟುವ ನಿಟ್ಟಿನಲ್ಲಿ ಕಾರ್ಯತಂತ್ರ ರೂಪಿಸಲು ಭಾರತವೂ ಸೇರಿದಂತೆ ವಿಶ್ವದ 60ಕ್ಕೂ ಹೆಚ್ಚು ರಾಷ್ಟ್ರಗಳು ಭಾಗವಹಿಸಿವೆ.
ಮೂರು ದಿನಗಳ ಕಾಲ ಈ ಸಮಾವೇಶ ನಡೆಯಲಿದ್ದು ಮೊದಲೆರಡು ದಿನ ಸ್ಥಳೀಯ ಭಯೋತ್ಪಾದನೆ ನಿಯಂತ್ರಣದ ಬಗ್ಗೆ ಚರ್ಚೆ ನಡೆಸಲಾಗುತ್ತದೆ.
ಅಂತಿಮ ದಿನವಾದ ಗುರುವಾರ ಭಾರತ ಸೇರಿದಂತೆ 60ಕ್ಕೂ ಹೆಚ್ಚಿನ ದೇಶಗಳು ವಿದೇಶಾಂಗ ಖಾತೆ ಮತ್ತು ರಕ್ಷಣಾ ಖಾತೆ ಸಚಿವರುಗಳು ಪಾಲ್ಗೊಂಡು ನಿರ್ಣಾಯಕ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ.
ಈ ಸಮಾವೇಶದಲ್ಲಿ ಭಾರತವನ್ನು ಜಂಟಿ ಜಾಗೃತ ಸಮಿತಿ ಅಧ್ಯಕ್ಷ ಆರ್.ಎನ್.ರವಿ ಪ್ರತಿನಿಧಿಸಲಿದ್ದಾರೆ. ಜಾಗತಿಕ ಮಟ್ಟದಲ್ಲಿ ಇಸಿಸ್, ಅಲ್ ಖೈದಾ ಸೇರಿದಂತೆ ಹಲವು ಉಗ್ರ ಸಂಘಟನೆಗಳು ಯುವಜನತೆಯನ್ನು ತಮ್ಮತ್ತ ಸೆಳೆಯುತ್ತಿರುವುದನ್ನು ತಡೆಯಲು ಅಮೆರಿಕ ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳಲು ಮುಂದಾಗಿದೆ.
ಉಗ್ರ ಸಂಘಟನೆಗಳಿಗೆ ಹಣದ ನೆರವು ಹಾಗೂ ಆಶ್ರಯ ನೀಡುತ್ತಿರುವ ರಾಷ್ಟ್ರಗಳನ್ನು ಮಟ್ಟ ಹಾಕುವ ಬಗ್ಗೆಯೂ ಅಮೆರಿಕ ಶಿಸ್ತಿನ ಕ್ರಮ ಕೈಗೊಳ್ಳಲು ಕಾರ್ಯತಂತ್ರ ರೂಪಿಸುವ ನಿರೀಕ್ಷೆ ಇದೆ.