ಲಿಬಿಯಾ : ಸಿರಿಯಾ ಮತ್ತು ಇರಾಕ್ ನಲ್ಲಿ ಅಟ್ಟಹಾಸಗೈಯುತ್ತಿದ್ದ ಐಸಿಸ್ ಉಗ್ರರು ಇದೀಗ ಲಿಬಿಯಾದ ಟ್ರಿಪೋಲಿಯ ಕರಾವಳಿ ತೀರದಲ್ಲಿ ಸಾಮೂಹಿಕವಾಗಿ 21 ಮಂದಿ ಈಜಿಪ್ಟ್ ನ ಕ್ರಿಶ್ಚಿಯನ್ ರನ್ನು ಶಿರಚ್ಛೇದನ ಮಾಡಿರುವ ವಿಡಿಯೋವನ್ನು ಬಿಡುಗಡೆ ಮಾಡಿದ್ದಾರೆ.
ಈ ಮೊದಲು ಸಿರಿಯಾ, ಇರಾಕ್ ನಲ್ಲಿ ನಡೆಸಿದ ಶಿರಚ್ಛೇದನದ ವಿಡಿಯೋವನ್ನು ಬಿಡುಗಡೆ ಮಾಡುತ್ತಿದ್ದ ಐಸಿಸ್, ಮೊದಲ ಬಾರಿಗೆ ಲಿಬಿಯಾದಲ್ಲಿಯೂ ತಾನು ನಡೆಸಿರುವ ಬೀಭತ್ಸ ಕೃತ್ಯದ ವಿಡಿಯೋವನ್ನು ಬಿಡುಗಡೆ ಮಾಡಿದೆ.
ಕೆಲವು ವಾರಗಳ ಹಿಂದೆ ಲಿಬಿಯಾದಲ್ಲಿನ ಈಜಿಪ್ಟ್ ಕ್ರಿಶ್ಚಿಯನ್ ರನ್ನು ಅಪಹರಿಸಿದ್ದ ಐಸಿಸ್ ಒತ್ತೆಯಾಳನ್ನಾಗಿ ಇಟ್ಟುಕೊಂಡಿತ್ತು. ಒಬ್ಬೊಬ್ಬರಾಗಿಯೇ ಕಡಲ ತೀರಕ್ಕೆ ಬೆನ್ನುಹಾಕಿ ಮಂಡಿಯೂರಿ ಕುಳಿತುಕೊಳ್ಳುವ ದೃಶ್ಯ ವಿಡಿಯೋದಲ್ಲಿದೆ.ಎಲ್ಲಾ ಒತ್ತೆಯಾಳುಗಳಿಗೂ ಕಿತ್ತಳೆ ಬಣ್ಣದ ಜಂಪ್ ಸ್ಯೂಟ್ ಅನ್ನು ಹಾಕಲಾಗಿತ್ತು.
ಅಷ್ಟೇ ಅಲ್ಲ 21 ಮಂದಿಯ ಹಿಂದೆ ಶಿರಚ್ಛೇದ ಮಾಡಲು ಕಪ್ಪು ಬಟ್ಟೆ ಮುಸುಕುಧಾರ ಐಸಿಸ್ ಉಗ್ರರು ನಿಂತಿರುವ ದೃಶ್ಯವನ್ನು ಚಿತ್ರಿಕರೀಸಲಾಗಿದೆ ಎಂದು ವರದಿ ವಿವರಿಸಿದೆ. ಸಮುದ್ರದ ಅಲೆಗಳ ಶಬ್ದ ಮಾತ್ರ ಕೇಳಿಸುತ್ತಿದ್ದು, ನಂತರ ಒಬ್ಬೊಬ್ಬರ ಶಿರಚ್ಛೇದ ಮಾಡುವ ಭಯಾನಕ ದೃಶ್ಯ ವಿಡಿಯೋದಲ್ಲಿದೆ.
ಐಸಿಸ್ ಉಗ್ರರು ಒತ್ತೆಯಾಳನ್ನಾಗಿ ಇಟ್ಟುಕೊಂಡಿದ್ದ 21 ಮಂದಿ ಈಜಿಪ್ಟ್ ಕ್ರಿಶ್ಚಿಯನ್ ರನ್ನು ಹತ್ಯೆಗೈದಿರುವುದಾಗಿ ಕೊಪ್ಟಿಕ್ ಚರ್ಚ್ ವಕ್ತಾರ ಖಚಿತಪಡಿಸಿರುವುದಾಗಿ ಈಜಿಪ್ಟ್ ಸ್ಟೇಟ್ ನ್ಯೂಸ್ ಏಜೆನ್ಸಿ ವರದಿ ತಿಳಿಸಿದೆ.