ಬೆಂಗಳೂರು : 'ಆನೇಕಲ್' ತಾಲೂಕಿನ ಬಿದರಗೆರೆ ಬಳಿ ಭೀಕರ ರೈಲು ಅಪಘಾತ ಸಂಭವಿಸಿದ್ದು ದುರಂತದಲ್ಲಿ ಒಂದು ಮಗು ಸೇರಿ 8 ಪ್ರಯಾಣಿಕರು ಮೃತಪಟ್ಟಿದ್ದಾರೆ. 50ಕ್ಕೂ ಹೆಚ್ಚು ಜನರು ತೀವ್ರವಾಗಿ ಗಾಯಗೊಂಡಿದ್ದಾರೆ.
ಬೆಂಗಳೂರು-ಹೊಸೂರು ಮಾರ್ಗ ಮಧ್ಯೆ ಆನೇಕಲ್ ಸಮೀಪದ ಬಿದರಗೆರೆ ಬಳಿ ಬೆಂಗಳೂರು-ಎರ್ನಾಕುಲಂ ಎಕ್ಸ್ ಪ್ರೆಸ್ ರೈಲಿನ 8 ಬೋಗಿಗಳು ಹಳಿ ತಪ್ಪಿದ ಪರಿಣಾಮ ಈ ಅಪಘಾತ ಸಂಭವಿಸಿದೆ. ಹಳಿಯ ಮೇಲೆ ಬಂಡೆಕಲ್ಲು ಬಿದ್ದಿರುವುದೇ ಘಟನೆಗೆ ಕಾರಣ ಎಂದು ತಿಳಿದುಬಂದಿದೆ.
ಘಟನೆಯಲ್ಲಿ ಇಬ್ಬರು ವಿದೇಶಿ ಪ್ರಯಾಣಿಕರಿಗೂ ಗಾಯಗಳಾಗಿದ್ದು, ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ದುರಂತದ ಬಗ್ಗೆ ಕೇಂದ್ರ ರೈಲ್ವೇ ಸಚಿವ ಸುರೇಶ್ ಪ್ರಭು ಪ್ರತಿಕ್ರಿಯಿಸಿದ್ದು ಸಂತಾಪ ವ್ಯಕ್ತಪಡಿಸಿದ್ದಾರೆ. ಘಟನಾ ಸ್ಥಳಕ್ಕೆ ತೆರಳುವಂತೆ ಕೇಂದ್ರ ಕಾನೂನು ಸಚಿವ ಸದಾನಂದ ಗೌಡರಿಗೆ ಸೂಚನೆ ನೀಡಿರುವುದಾಗಿ ಸುರೇಶ್ ಪ್ರಭು ಟ್ವೀಟ್ ಮಾಡಿದ್ದಾರೆ.
ಇದೇ ವೇಳೆ ರಾಜ್ಯ ಸರ್ಕಾರದಿಂದ ಗೃಹ ಸಚಿವ ಕೆ.ಜೆ ಜಾರ್ಜ್, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸ್ಥಳಕ್ಕೆ ತೆರಳಿದ್ದಾರೆ. ಘಟನೆ ಸಂಬಂಧಿಸಿದಂತೆ ರೈಲ್ವೇ ಇಲಾಖೆ ಮಾಹಿತಿ ಪಡೆಯಲು ಹೆಲ್ಪ್ ಲೈನ್ ನಂಬರ್ ನೀಡಿದೆ.
ಹೆಲ್ಪ್ ಲೈನ್ ನಂಬರ್-9731666751, 080-22371166, 080-22943666