ನವದೆಹಲಿ : 'ಗೂಗಲ್' ನ ಸ್ಕೈ ಬಾಕ್ಸ್ ಇಮೇಜಿಂಗ್ ಉಪಗ್ರಹವನ್ನು ಉಡಾವಣೆ ಮಾಡಲು ಇಸ್ರೋ ಸಿದ್ಧತೆ ನಡೆಸಿದೆ. ಶ್ರೀಹರಿಕೋಟಾದ ಬಾಹ್ಯಾಕಾಶ ಕೇಂದ್ರದಿಂದ ಈ ಉಪಗ್ರಹವನ್ನು ಉಡಾವಣೆ ಮಾಡಲಾಗುತ್ತದೆ.
ಏಷಿಯನ್ ಏಜ್ ನ ವರದಿಗಳ ಪ್ರಕಾರ, ಇದೇ ಪ್ರಥಮ ಬಾರಿಗೆ ಇಸ್ರೋ ಯು.ಎಸ್ ಉಪಗ್ರಹವೊಂದನ್ನು ಉಡಾವಣೆ ಮಾಡುತ್ತಿದೆ ಎಂದು ತಿಳಿದುಬಂದಿದೆ. ಸ್ಯಾಟಲೈಟ್ ಇಮೇಜಿಂಗ್ ಕಂಪನಿಯಾದ ಸ್ಕೈ ಬಾಕ್ಸ್ ಇಮೇಜಿಂಗ್ ನನ್ನು ಖರೀದಿಸಿರುವ ಗೂಗಲ್ ಆನ್ಲೈನ್ ಮ್ಯಾಪಿಂಗ್ ಮೂಲಕ, ಈಗಿನ ನಕ್ಷೆಗಳಿಗಿಂತಲೂ ನಿಖರ ನಕ್ಷೆಗಳನ್ನು ರೂಪಿಸುವ ಯೋಜನೆ ಹೊಂದಿದೆ.
ಸ್ಕೈಬಾಕ್ಸ್ ನ ಸ್ಯಾಟಲೈಟ್ ಗಳು ಗೂಗಲ್ ನ ಆನ್ ಲೈನ್ ಮ್ಯಾಪಿಂಗ್ ಗೆ ಹೆಚ್ಚು ಚಿತ್ರಗಳನ್ನು ಒದಗಿಸಲಿದೆ. ಈ ತಂತ್ರಾಜ್ಞಾನ ವಿಪತ್ತು ನಿರ್ವಹಣಾ ಕಾರ್ಯಚರಣೆಯಲ್ಲಿ ಪರಿಣಾಮಕಾರಿಯಾಗಿ ಬಳಸಲು ನೆರವಾಗುವುದು ಎಂದು ಗೂಗಲ್ ತಿಳಿಸಿದೆ.
ಕಂಪನಿ ಮಾರಾಟಕ್ಕೂ ಮುನ್ನ 120 ಕೆ.ಜಿ ಉಪಗ್ರಹವೊಂದನ್ನು ಉಡಾವಣೆ ಮಾಡಲು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಅಂಗ ಸಂಸ್ಥೆ ಆಂಟ್ರಿಕ್ಸ್ ಕಾರ್ಪೊರೇಷನ್ ಲಿಮಿಟೆಡ್ ನೊಂದಿಗೆ ಸ್ಕೈ ಬಾಕ್ಸ್ ಒಪ್ಪಂದ ಮಾಡಿಕೊಂಡಿತ್ತು. ಇದೀಗ ಸ್ಕೈ ಬಾಕ್ಸ್ ತಂಡದ ಸಹಕಾರ ಪಡೆದು ಗೂಗಲ್ ಮ್ಯಾಪ್ ನಲ್ಲಿ ನಿಖರ ನಕ್ಷೆಗಳನ್ನು ನೀಡುವ ಸಂಬಂಧ ಯೋಜನೆ ರೂಪಿಸಿದೆ. ಇದಕ್ಕಾಗಿ ಇಸ್ರೋ ಉಪಗ್ರಹವೊಂದನ್ನು ಉಡಾವಣೆ ಮಾಡಲಿದೆ.