ನವದೆಹಲಿ : 'ಸುನಂದಾ ಪುಷ್ಕರ್' ಹತ್ಯೆ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಮಾಜಿ ಕೇಂದ್ರ ಸಚಿವ ಶಶಿತರೂರ್ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ವಜಾಗೊಳಿಸಿದೆ.
ಸುನಂದಾ ಪುಷ್ಕರ್ ಕೊಲೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಮನವಿ ಮಾಡಿ ಶಶಿತರೂರ್ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.
ಸುನಂದಾ ಪುಷ್ಕರ್ ಕೊಲೆ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿರುವ ಹಿನ್ನೆಲೆಯಲ್ಲಿ ತನಿಖೆಯನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಅರ್ಜಿ ಸಲ್ಲಿಸಲಾಗಿತ್ತು. ಇಂದು ಅರ್ಜಿಯ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್ ಅರ್ಜಿ ವಜಾಗೊಳಿಸಿದೆ.
ಕೊಲೆ ಪ್ರಕರಣದಲ್ಲಿ ಶಶಿತರೂರ್ ಈಗಾಗಲೇ ಸಿಬಿಐ ತನಿಖೆ ಎದುರಿಸುತ್ತಿದ್ದಾರೆ. ಶಶಿತರೂರ್ ಅವರನ್ನು ನಾಳೆ ಮತ್ತೆ ವಿಚಾರಣಗೆ ಒಳಪಡಿಸಲಾಗುವುದು ಎಂದು ದೆಹಲಿ ನಗರ ಪೊಲೀಸ್ ಆಯುಕ್ತ ಬಿ.ಎಸ್ ಬಸ್ಸಿ ಇದೇ ವೇಳೆ ತಿಳಿಸಿದ್ದಾರೆ. ಸುನಂದಾ ಪುಷ್ಕರ್ ಕೊಲೆ ಪ್ರಕರಣಕ್ಕೂ ಐಪಿಎಲ್ ಹಗರಣಕ್ಕೂ ಸಂಬಂಧವಿದ್ದು ದೆಹಲಿ ಪೊಲೀಸರು, ಈ ಆಯಾಮದಿಂದ ತನಿಖೆ ನಡೆಸುತ್ತಿದ್ದಾರೆ. ಈ ಬಗ್ಗೆ ಮತ್ತಷ್ಟು ಮಾಹಿತಿ ಪಡೆಯುವ ಉದ್ದೇಶದಿಂದ ಶಶಿತರೂರ್ ಅವರನ್ನು ಮತ್ತೆ ವಿಚಾರಣೆಗೆ ಒಳಪಡಿಸಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.