ನವದೆಹಲಿ : ಈ ತಿಂಗಳ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಮಾತನಾಡಬೇಕಿರುವ ವಿಷಯದ ಬಗ್ಗೆ ಪ್ರಸ್ತಾಪಿಸಿರುವ ಪ್ರಧಾನಿ ನರೇಂದ್ರ ಮೋದಿ, ಈ ಬಾರಿಯ ಕಾರ್ಯಕ್ರಮದಲ್ಲಿ ಪರೀಕ್ಷೆಗಳಿಗೆ ಸಂಬಂಧಿಸಿದ ವಿಷಯಗಳನ್ನು ಹಂಚಿಕೊಳ್ಳುವಂತೆ ವಿದ್ಯಾರ್ಥಿಗಳನ್ನು ಆಹ್ವಾನಿಸಿದ್ದಾರೆ.
ಸಿ.ಬಿ.ಎಸ್.ಸಿ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳು ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಿಕೊಳ್ಳುತ್ತಿರುವವರ ಬಗ್ಗೆ ಈ ಬಾರಿಯ ಮನ್ ಕಿ ಬಾತ್ ನಲ್ಲಿ ಮಾತನಾಡುವುದಾಗಿ ಪ್ರಧಾನಿ ಮೋದಿ ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪೋಷಕರು ಪರೀಕ್ಷಾ ತಯಾರಿ ಕುರಿತು ತಮ್ಮ ಅನುಭವಗಳನ್ನು ಹಂಚಿಕೊಳ್ಳುವಂತೆ ಮೋದಿ ಆಹ್ವಾನ ನೀಡಿದ್ದಾರೆ. http://mygov.in/groupissue/inputs-for-mann-ki-baat-february-2015/show. ಮೂಲಕ ತಮ್ಮ ಅನುಭವಗಳನ್ನು ತಿಳಿಸಬಹುದು ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಪರೀಕ್ಷೆಗಳ ಕುರಿತು ಮಾತನಾಡುವುದರಿಂದ ಯುವಪೀಳಿಗೆಗಳಿಗೆ ಪರೀಕ್ಷೆಗಳಿಗೆ ಮತ್ತಷ್ಟು ತಯಾರಿ ಮಾಡಿಕೊಳ್ಳಲು ಪ್ರೇರಣೆ ದೊರೆಯಲಿದೆ ಎಂದು ಮೋದಿ ಅಭಿಪ್ರಾಯಪಟ್ಟಿದ್ದಾರೆ.
ಮಾರ್ಚ್.2ರಿಂದ ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ ಪರೀಕ್ಷೆ ನಡೆಯಲಿರುವ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ, ಮನ್ ಕಿ ಬಾತ್ ಕಾರ್ಯಕ್ರಮಕ್ಕೆ ಈ ವಿಷಯವನ್ನು ಆಯ್ಕೆ ಮಾಡಿಕೊಂಡಿದ್ದಾರೆ.