ನವದೆಹಲಿ : ದೆಹಲಿ ಮುಖ್ಯಮಂತ್ರಿ ಅಭ್ಯರ್ಥಿ ಕಿರಣ್ ಬೇಡಿ ಅವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದ ಬಿಜೆಪಿ ನಾಯಕ ನರೇಂದ್ರ ಟಂಡನ್ ಪಕ್ಷಕ್ಕೆ ನೀಡಿದ್ದ ರಾಜೀನಾಮೆಯನ್ನು ವಾಪಸ್ ಪಡೆದಿದ್ದಾರೆ.
ಮಾಧ್ಯಮಗಳಿಗೆ ತಾವು ರಾಜೀನಾಮೆ ವಾಪಸ್ ಪಡೆದಿರುವುದನ್ನು ಸ್ಪಷ್ಟಪಡಿಸಿರುವ ನರೇಂದ್ರ ಟಂಡನ್, ತಾವು ಆತುರದ ನಿರ್ಧಾರ ಕೈಗೊಂಡಿದ್ದಾಗಿ ತಿಳಿಸಿದ್ದಾರೆ. ಅಲ್ಲದೇ ಇನ್ನು ಮುಂದೆ ಬಿಜೆಪಿಯಲ್ಲೇ ಮುಂದುವರೆಯುವುದಾಗಿ ಟಂಡನ್ ತಿಳಿಸಿದ್ದಾರೆ.
ನರೇಂದ್ರ ಟಂಡನ್, ತಾವು ರಾಜೀನಾಮೆ ನೀಡಿದ್ದಕ್ಕಾಗಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರಲ್ಲಿ ಕ್ಷಮೆ ಕೋರಿದ್ದಾರೆ ಎಂದು ತಿಳಿದುಬಂದಿದೆ. ಅಮಿತ್ ಶಾ ಅವರೊಂದಿಗೆ ಮಾತುಕತೆ ನಡೆಸಿದ ಬಳಿಕ ನರೇಂದ್ರ ಟಂಡನ್ ರಾಜೀನಾಮೆ ವಾಪಸ್ ಪಡೆದಿದ್ದಾರೆ.
ಕಿರಣ್ ಬೇಡಿ ಅವರು ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿ, ಬಿಜೆಪಿಯ ಎಲ್ಲಾ ಹುದ್ದೆಗಳಿಗೂ ನರೇಂದ್ರ ಟಂಡನ್ ರಾಜೀನಾಮೆ ನೀಡಿದ್ದರು. ರಾಜೀನಾಮೆ ಪತ್ರದಲ್ಲಿ ಕಿರಣ್ ಬೇಡಿ ಎಲ್ಲರ ಮೇಲೂ ಅಧಿಕಾರ ಚಲಾಯಿಸುತ್ತಿದ್ದಾರೆ. ಪಕ್ಷದ ಯಾವೊಬ್ಬ ನಾಯಕರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ ಎಂದು ನರೇಂದ್ರ ಟಂಡನ್ ಆಕ್ರೋಶ ವ್ಯಕ್ತಪಡಿಸಿದ್ದರು.