ಬೆಂಗಳೂರು : 'ವಿಧಾನಮಂಡಲ ಅಧಿವೇಶನ'ದ ಹಿನ್ನೆಲೆಯಲ್ಲಿ ಸರ್ಕಾರ ರಾಜ್ಯಪಾಲರಿಂದ ಸುಳ್ಳನ್ನು ಹೇಳಿಸಿದೆ ಎಂದು ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್ ಈಶ್ವರಪ್ಪ ಹೇಳಿದ್ದಾರೆ.
ಫೆ.2ರಂದು ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಿದ ರಾಜ್ಯಪಾಲರ ಭಾಷಣದ ಬಗ್ಗೆ ಪ್ರತಿಕ್ರಿಯಿಸಿದ ಕೆ.ಎಸ್ ಈಶ್ವರಪ್ಪ, ರಾಜ್ಯಪಾಲರ ಭಾಷಣ ಸುಳ್ಳಿನ ಕಂತೆ ಎಂದು ಟೀಕಿಸಿದ್ದಾರೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ರಾಜ್ಯಪಾಲರ ಮೂಲಕ ಸುಳ್ಳನ್ನು ಹೇಳಿಸಿದೆ ಎಂದಿದ್ದಾರೆ.
ಪ್ರತಿದಿನವೂ ಅತ್ಯಾಚಾರ, ಕೊಲೆ ಪ್ರಕರಣಗಳು ಹೆಚ್ಚುತ್ತಿದ್ದರೂ ರಾಜ್ಯಪಾಲರು ತಮ್ಮ ಭಾಷಣದಲ್ಲಿ ರಾಜ್ಯ ಸರ್ಕಾರ ಕಾನೂನು ಸುವ್ಯವಸ್ಥೆಯನ್ನು ಕಾಪಾಡುತ್ತಿದೆ ಎಂದು ಹೇಳಿದ್ದಾರೆ, ರಾಜ್ಯಪಾಲರ ಭಾಷಣ ಸುಳ್ಳಿನ ಕಂತೆ ಎಂಬುದಕ್ಕೆ ಇದೇ ಸಾಕ್ಷಿ ಎಂದು ಈಶ್ವರಪ್ಪ ಹೇಳಿದ್ದಾರೆ.
ಇದೇ ವೇಳೆ ಭಾಷಣದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್.ಡಿ ಕುಮಾರಸ್ವಾಮಿ, ರಾಜ್ಯಪಾಲರ ಭಾಷಣ ಚರ್ಚೆಯ ವಿಷಯವೇ ಅಲ್ಲ. ರಾಜ್ಯಪಾಲರು ಹಳೆ ವಿಚಾರವನ್ನೇ ಪುನರುಚ್ಛರಿಸಿದ್ದಾರೆ. ಸರ್ಕಾರಕ್ಕೆ ರಾಜ್ಯದ ಅಭಿವೃದ್ಧಿ ಬಗ್ಗೆ ಕಾಳಜಿ, ಮುಂದಾಲೋಚನೆಯೇ ಇಲ್ಲ ಎಂದು ಟೀಕಿಸಿದ್ದಾರೆ.